ಬೆಂಗಳೂರು: ರಾಜ್ಯದಲ್ಲಿ ಮತ್ತೆ ಕೊರೊನಾ ವೈರಸ್ (Corona Virus) ಅಬ್ಬರ ಶುರುವಾಗಿದ್ದು, ಇಂದು 22 ಮಂದಿಯಲ್ಲಿ ಕೋವಿಡ್ 19 ಪಾಸಿಟಿವ್ ಇರುವುದು ದೃಢಪಟ್ಟಿದೆ. ಶ್ವಾಸಕೋಶ ಸಂಬಂಧಿ ಸಮಸ್ಯೆಯಿಂದ ಬಳಲುತ್ತಿದ್ದ ಓರ್ವ ವೃದ್ಧ ಕೋವಿಡ್ ಸೋಂಕಿನಿಂದ ಸಾವಿಗೀಡಾಗಿದ್ದು, ಈ ಮೂಲಕ ಸಾವಿನ ಸಂಖ್ಯೆ ಮೂರಕ್ಕೆ ಏರಿಕೆ ಕಂಡಿದೆ.
ರಾಜ್ಯದಲ್ಲಿ 808 ಮಂದಿಗೆ ಕೋವಿಡ್ ಟೆಸ್ಟ್ (Covid Test) ನಡೆಸಲಾಗಿದೆ. ರಾಜ್ಯದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 92ಕ್ಕೆ ಏರಿದೆ. 20 ಸೋಂಕಿತರು ಆಸ್ಪತ್ರೆಯಲ್ಲಿದ್ದಾರೆ. ಈ ಪೈಕಿ 7 ಮಂದಿ ಐಸಿಯುನಲ್ಲಿದ್ದಾರೆ. 72 ಮಂದಿ ಹೋಂ ಐಸೋಲೇಷನ್ ನಲ್ಲಿದ್ದಾರೆ. ಐವರು ಈಗಾಗಲೇ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಪಾಸಿಟಿವಿಟಿ ರೇಟ್ 2.47% ರಷ್ಟಿದೆ.
ಕೋವಿಡ್ ಉಪತಳಿ ಜೆಎನ್.1 ವೈರಸ್ ಬಗ್ಗೆ ಅಲರ್ಟ್ ಆಗಿರುವಂತೆ ಕೇಂದ್ರ ಸರ್ಕಾರ ಎಲ್ಲಾ ರಾಜ್ಯಗಳನ್ನು ಅಲರ್ಟ್ ಮಾಡಿದೆ. ಆದರೆ ಇದರ ಬಗ್ಗೆ ಆತಂಕಪಡಬೇಕಿಲ್ಲ ಎಂಬ ಮಾತನ್ನು ಕೂಡ ಸೇರಿಸಿದೆ. ಕೋವಿಡ್ ಹೆಚ್ಚಾಗ್ತಿರೋ ಹಿನ್ನೆಲೆಯಲ್ಲಿ ಇಂದು ಕೇಂದ್ರ ಆರೋಗ್ಯ ಸಚಿವ ಮನ್ಸೂಖ್ ಮಾಂಡವೀಯ ಎಲ್ಲಾ ರಾಜ್ಯಗಳ ಆರೋಗ್ಯ ಸಚಿವರ ಜೊತೆ ವರ್ಚೂವಲ್ ಸಭೆ ನಡೆಸಿದ್ರು. ಈ ಸಂದರ್ಭದಲ್ಲಿ ಹಲವು ಸಲಹೆ ಸೂಚನೆಗಳನ್ನು ನೀಡಿದ್ರು. ಈ ಸಭೆಯಲ್ಲಿ ಸಚಿವ ದಿನೇಶ್ ಗುಂಡೂರಾವ್ ಪಾಲ್ಗೊಂಡಿದ್ರು. ನಾವು ಎಲ್ಲಾ ರೀತಿಯಿಂದ ಸನ್ನದ್ದರಾಗಿದ್ದೇವೆ. ಅಗತ್ಯಬಿದ್ರೆ ನೆರವು ಕೇಳ್ತೇವೆ, ಸಹಕಾರ ಕೊಡಿ ಎಂದು ಕೇಂದ್ರ ಸಚಿವರನ್ನು ಕೋರಿದರು.