ಬೆಂಗಳೂರು: ರಾಜ್ಯದಲ್ಲಿ ಕೊರೊನಾ ವೈರಸ್ (Corona Virus) ಆತಂಕ ಮತ್ತೆ ಶುರುವಾಗಿದ್ದು, ಗಡಿಜಿಲ್ಲೆಗಳಿಗೆ ಕೇರಳದ ಭಯ ಕಾಡುತ್ತಿದೆ. ನರ್ಸಿಂಗ್ -ಮೆಡಿಕಲ್ ವಿದ್ಯಾರ್ಥಿಗಳಿಗೆ ಜಿಲ್ಲಾಡಳಿತ ಖಡಕ್ ಸೂಚನೆ ಕೊಟ್ಟಿದೆ. ಅಯ್ಯಪ್ಪ ವೃತಾಧಾರಿಗಳ ಮೇಲೆ ವೈದ್ಯಾಧಿಕಾರಿಗಳು ನಿಗಾ ಇಟ್ಟಿದ್ದಾರೆ. ಮಕ್ಕಳಲ್ಲೂ ಶೀತ, ಜ್ವರ, ಕೆಮ್ಮು ಕಾಣಿಸಿಕೊಳ್ತಿದ್ದು, ಶಾಲೆಗೆ ಗೈರಾಗ್ತಿದ್ದಾರೆ.
ಸಾಂಕ್ರಾಮಿಕ ರೋಗಗಳು ಬಂದ್ರೆ ಹತ್ತು ವರ್ಷಗಳ ಕಾಲ ಕಾಟ ಕೊಡುತ್ತದೆ. ಜನರನ್ನ ಕಾಡಿ ಬಿಡುತ್ತದೆ ಎಂದು ತಜ್ಞರು ಅಂದೇ ಹೇಳಿದ್ರು. ಇದು ಕೊರೋನಾ ವಿಚಾರದಲ್ಲಿ ಸತ್ಯವಾಗುವ ಲಕ್ಷಣಗಳು ಕಾಣುತ್ತಿದೆ. ಕರಾವಳಿ ಜಿಲ್ಲೆ ಉಡುಪಿಗೆ ಪಕ್ಕದ ರಾಜ್ಯ ಕೇರಳ ಕಾಡುತ್ತಿದೆ. ಕೇರಳದಿಂದ ಸಾವಿರಾರು ಜನ ಮೆಡಿಕಲ್, ನಸಿರ್ಂಗ್ ಓದಲು ಉಡುಪಿಗೆ ಬರುತ್ತಾರೆ. ಕ್ರಿಸ್ಮಸ್ ರಜೆ, ಹೊಸ ವರ್ಷದ ರಜೆ ಇರುವುದರಿಂದ ಎಲ್ಲರೂ ಊರಿಗೆ ತೆರಳಿದ್ದಾರೆ. ಕೇರಳದಲ್ಲಿ ಸೋಂಕು ಹೆಚ್ಚಿರುವ ಕಾರಣ ವಾಪಸ್ ಬರುವ ವಿದ್ಯಾರ್ಥಿಗಳ ಮೇಲೆ ನಿಗಾ ಇಡಬೇಕಾಗಿದೆ. ಹೇಳಿಕೇಳಿ ಉಡುಪಿ ಪ್ರವಾಸಿ ಜಿಲ್ಲೆ. ದೇವಸ್ಥಾನ, ಬೀಚ್ಗೆ ಪ್ರತಿದಿನ ಸಾವಿರ ಸಾವಿರ ಸಂಖ್ಯೆಯಲ್ಲಿ ಜನ ಬರುತ್ತಿದ್ದಾರೆ. ರಜಾದಿನಗಳು ಬಂದ್ರೆ ಕೇಳೋದೆ ಬೇಡ. ಕೃಷ್ಣಮಠಕ್ಕೆ ಪ್ರತಿದಿನ 20ರಿಂದ 30,000 ಜನ ಬರುತ್ತಿದ್ದಾರೆ. ದೇವರ ದರ್ಶನ, ಉತ್ಸವ, ಅನ್ನಪ್ರಸಾದದಲ್ಲಿ ಜನ ಜಂಗಳಿಯೇ ಆಗುತ್ತದೆ. ಅನಾರೋಗ್ಯ ಪೀಡಿತರು ವಯಸ್ಕರು ಕೊರೋನಾದ ಲಕ್ಷಣ ಕಂಡು ಬಂದವರು ಬಹಳಷ್ಟು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಜಿಲ್ಲಾಡಳಿತ ವೈದ್ಯಾಧಿಕಾರಿಗಳು ಸೂಚನೆಗಳನ್ನು ಕೊಡುತ್ತಿದ್ದಾರೆ.
ಮಕ್ಕಳಿಗೆ ಹೆಚ್ಚಾದ ಶೀತ, ನೆಗಡಿ, ಕೆಮ್ಮು: ಚಾಮರಾಜನಗರ ಜಿಲ್ಲೆ ಸೇರಿದಂತೆ ರಾಜ್ಯಾದ್ಯಂತ ಪಾಸಿಟಿವ್ ಕೇಸ್ಗಳ ಸಂಖ್ಯೆ ದಿನೇ ದಿನೇ ಗಣನೀಯವಾಗಿ ಏರಿಕೆಯಾಗ್ತಿದೆ.. ಈ ನಡುವೆ ಮಕ್ಕಳಲ್ಲಿ ಜ್ವರ, ಶೀತ, ಕೆಮ್ಮು ಕಾಣಿಸಿಕೊಳ್ಳುತ್ತಿರುವ ಹಿನ್ನಲೆ ಯಳಂದೂರಿನ ಬಳೆ ಪೇಟೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 15ಕ್ಕೂ ಹೆಚ್ಚು ಮಕ್ಕಳು ಗೈರಾಗಿದ್ದಾರೆ. 3 ದಿನದಿಂದ ಮಕ್ಕಳು ಶಾಲೆಗೆ ಬಾರದೇ ಇದ್ದರಿಂದ ಮನೆಗೆ ತೆರಳಿ ವಿಚಾರಿಸಿದಾಗ ಜ್ವರ, ಶೀತ, ಕೆಮ್ಮಿನಿಂದ ಬಳಲುತ್ತಿರೋದು ಬೆಳಕಿಗೆ ಬಂದಿದೆ. ಈಗಾಗ್ಲೆ ತಜ್ಞ ವೈದ್ಯರು ಹಾಗೂ ಆರೋಗ್ಯ ಇಲಾಖೆ ನೆಗಡಿ, ಕೆಮ್ಮು ಹಾಗೂ ಜ್ವರದಿಂದ ಬಳಲುತ್ತಿರುವ ಮಕ್ಕಳನ್ನ ಶಾಲೆಗೆ ಕಳಿಸದಿರಿ ಎಂದು ಪೋಷಕರಿಗೆ ಕಿವಿ ಮಾತನ್ನ ಹೇಳಿದ್ದು, ಜೊತೆಗೆ ಶಿಕ್ಷಣ ಇಲಾಖೆ ಸುತ್ತೋಲೆ ಸಹ ಹೊರಡಿಸಿದೆ.
ಧಾರವಾಡದಲ್ಲಿ ಇಬ್ಬರಿಗೆ ಕೋವಿಡ್ ಸೋಂಕು: ಧಾರವಾಡದ (Dharwad) ಇಬ್ಬರಲ್ಲಿ ಕೋವಿಡ್ ವೈರಸ್ ಪತ್ತೆಯಾಗಿದೆ. ಓರ್ವ ವಿದ್ಯಾರ್ಥಿ ಹಾಗೂ ವೃದ್ಧನಲ್ಲಿ ಈ ಸೋಂಕು ದೃಢವಾಗಿದೆ. ಯಾದಗಿರಿ (Yadagiri) ಮೂಲದ ವಿದ್ಯಾರ್ಥಿ ಧಾರವಾಡದಲ್ಲಿ ವ್ಯಾಸಂಗ ಮಾಡುತ್ತಿದ್ದ ಎಂದು ತಿಳಿದು ಬಂದಿದ್ದು, ಧಾರವಾಡದ ಖಾಸಗಿ ಆಸ್ಪತ್ರೆಯಲ್ಲಿ ವಿದ್ಯಾರ್ಥಿ ದಾಖಲು ಮಾಡಲಾಗಿದೆ. ಹುಬ್ಬಳ್ಳಿ (Hubballi) ಕಿಮ್ಸ್ ನಲ್ಲಿ ಸೋಂಕಿತ ವೃದ್ಧನಿಗೆ ಚಿಕಿತ್ಸೆ ನೀಡಲಾಗುತಿದ್ದು, ಆತ ಹಾವೇರಿ (Haveri) ಜಿಲ್ಲೆಯವರು ಎನ್ನಲಾಗಿದೆ. ಅನಾರೋಗ್ಯದ ಹಿನ್ನೆಲೆ ಹುಬ್ಬಳ್ಳಿ ಕಿಮ್ಸ್ ಗೆ ದಾಖಲಾಗಿದ್ದ ವೃದ್ಧನಿಗೆ ತಪಾಸಣೆ ವೇಳೆ ಕೊರೊನಾ ಪತ್ತೆಯಾಗಿದ್ದು, ಸದ್ಯ ಜೆಎನ್ 1 ತಪಾಸಣೆಗಾಗಿ ಮಾದರಿ ರವಾನೆ ಮಾಡಲಾಗಿದೆ.