ಬಳ್ಳಾರಿ;-ಕಾಂಗ್ರೆಸ್ನ ನಾನೇ ಸಿಎಂ ವಿವಾದದ ಬಗ್ಗೆ ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ಪ್ರತಿಕ್ರಯಿಸಿದ್ದಾರೆ.
ಈ ಸಂಬಂಧ ಮಾತನಾಡಿದ ಅವರು,ಕಾಂಗ್ರೆಸ್ನಲ್ಲಿ ಎಲ್ಲರೂ ಮುಖ್ಯಮಂತ್ರಿಯಾಗುವವರೇ..?. ನಾನು ಮುಖ್ಯಮಂತ್ರಿ ನಾನು ಮುಖ್ಯಮಂತ್ರಿ ಎಂದು 224 ಜನರು ಹೇಳುತ್ತಿದ್ದಾರೆ. ಇನ್ನೂ ರಾಜಕಾರಣದಲ್ಲಿ ಕಣ್ಣು ಬಿಟ್ಟಿಲ್ಲ, ಪ್ರಿಯಾಂಕ್ ಖರ್ಗೆ ನಾನು ಸಿಎಂ ಎನ್ನುತ್ತಾರೆ. ಅವರಪ್ಪನ ಹೆಸರು ಹೇಳಿದ್ದರೆ ಒಪ್ಪಿಕೊಳ್ಳುತ್ತಿದ್ದೆ. ಆದರೆ ನಾನೇ ಸಿಎಂ ಅಂತಾನೆ ಮಗ ಎಂದು ಪ್ರಿಯಾಂಕ್ ಖರ್ಗೆ ವಿರುದ್ಧ ಲೇವಡಿ ಮಾಡಿದ್ದಾರೆ
ಕಾಂಗ್ರೆಸ್ನಲ್ಲಿ ಮಲ್ಲಿಕಾರ್ಜುನ ಖರ್ಗೆಗೆ ಮುಖ್ಯಮಂತ್ರಿ ಆಗಲು ಬಿಟ್ಟಿಲ್ಲ. ಇನ್ನು ಇವರನ್ನು ಬಿಡುತ್ತಾರಾ. ಸತೀಶ್ ಜಾರಕಿಹೊಳಿ ಅವರು ಕೂಡ ಸಿಎಂ ರೇಸ್ನಲ್ಲಿದ್ದಾರೆ ಎನ್ನುತ್ತಾರೆ. ಇನ್ನೂ ಜಿ. ಪರಮೇಶ್ವರ ಅವರು ಮುಖ್ಯಮಂತ್ರಿಯಾಗಲಿ ಎಂದು ಸಚಿವ ಕೆ.ಎನ್ ರಾಜಣ್ಣ ಹೇಳುತ್ತಿದ್ದಾರೆ. ಪರಮೇಶ್ವರ ದೇವರು ಅನುಗ್ರಹ ಇದ್ದರೆ ಸಿಎಂ ಆಗುತ್ತೇನೆ ಎನ್ನುತ್ತಾರೆ. ದೇವರನ್ನು ಬೈಯುವ ಕಾಂಗ್ರೆಸ್ನವರು ಇದೀಗ ದೇವರು ಎನ್ನುತ್ತಾರೆ ಎಂದರು.
ಸಂವಿಧಾನ ತಿದ್ದುಪಡಿ ಮಾಡಿ ಜಾತಿಗೊಂದು ಮುಖ್ಯಮಂತ್ರಿ ಮಾಡಲಿ. ಪರಮೇಶ್ವರ ಮತ್ತು ಖರ್ಗೆಗಾಗಿ ಅದೊಂದು ಜಾತಿಗೆ ಎರಡು ಸಿಎಂ ಕೊಡಲಿ ನಮ್ಮ ಅಭ್ಯಂತರವಿಲ್ಲ. ಮಾನ ಮರ್ಯಾದೆ ಇಲ್ಲ ಮುಖ್ಯಮಂತ್ರಿ ಬಗ್ಗೆ ಮಾತನಾಡಲ್ಲ ಎಂದ ಸಿದ್ದರಾಮಯ್ಯ ಇಂದು ನಾನೇ ಮುಖ್ಯಮಂತ್ರಿ ನಾನೇ ಮುಖ್ಯಮಂತ್ರಿ ಎನ್ನುತ್ತಾರೆ. ನಂತರ ಉಲ್ಟಾ ಹೊಡೆಯುತ್ತಾರೆ ಎಂದು ಸಿದ್ದರಾಮಯ್ಯ ವಿರುದ್ಧ ಕೆ.ಎಸ್ ಈಶ್ವರಪ್ಪ ವಾಗ್ದಾಳಿ ನಡೆಸಿದ್ದಾರೆ.