ಬೆಂಗಳೂರು:- ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರಕ್ಕೆ ಕ್ರೈಸ್ತರ ಕೊಡುಗೆ ಅಪಾರ ಎಂದು ಮಹೇಶ್ ಜೋಶಿ ಹೇಳಿದ್ದಾರೆ.
ಈ ಸಂಬಂಧ ಮಾತನಾಡಿದ ಅವರು,ಕನ್ನಡ ಸಾಹಿತ್ಯ, ಶಾಸನ ಸಂರಕ್ಷಣೆ, ಸಾಂಸ್ಕೃತಿಕ ಪರಂಪರೆ, ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರಕ್ಕೆ ಕ್ರೈಸ್ತರು ಅಮೂಲ್ಯವಾದ ಕೊಡುಗೆ ನೀಡಿದ್ದಾರೆ ಎಂದರು.
ಕನ್ನಡದ ಮೊದಲ ನಿಘಂಟು ನೀಡಿದ ಫರ್ಡಿನೆಂಡ್ ಕಿಟ್ಟೆಲ್, ಕನ್ನಡದ ಮೊದಲ ಪತ್ರಿಕೆ ‘ಮಂಗಳೂರು ಸಮಾಚಾರ’ ಹೊರತಂದ ಹರ್ಮನ್ ಮೊಗ್ಲಿಂಗ್, ‘ಕನ್ನಡ ಶಾಸನ ಪಿತಾಮಹ’ ಎಂಬ ಹೆಗ್ಗಳಿಕೆ ಪಾತ್ರರಾದ ಬಿ.ಎಲ್. ರೈಸ್ ಸೇರಿ ಹಲವು ಕ್ರೈಸ್ತರು ಕನ್ನಡ ನಾಡು-ನುಡಿಗೆ ಅಚ್ಚಳಿಯದ ಕೊಡುಗೆ ನೀಡಿದ್ದಾರೆ. ಕನ್ನಡ ನಾಡಿನಲ್ಲಿ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿ, ಶಿಕ್ಷಣ ಕ್ಷೇತ್ರದಲ್ಲಿಯೂ ಬಹುದೊಡ್ಡ ಕೊಡುಗೆ ನೀಡಿದ್ದಾರೆ. ಆಸ್ಪತ್ರೆಗಳ ಸ್ಥಾಪನೆಯ ಮೂಲಕ ಆರೋಗ್ಯ ಕ್ಷೇತ್ರಕ್ಕೂ ಕ್ರೈಸ್ತರು ಸಾಮಾಜಿಕ ಕಾರ್ಯ ಮಾಡಿದ್ದಾರೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
‘ಕ್ರೈಸ್ತ ಸನ್ಯಾಸಿಗಳು ಶಿಕ್ಷಣ ಸಂಸ್ಥೆಗಳ ಮೂಲಕ ಸಮಾಜದ ಸುಧಾರಣೆಗೆ ಶ್ರಮಿಸಿದರು. ಯೇಸುಕ್ರಿಸ್ತನು ಜನಮಾನಸದಲ್ಲಿ ಶಾಂತಿ, ಪ್ರೀತಿ, ಸ್ನೇಹ, ಮಾನವೀಯ ಮೌಲ್ಯಗಳನ್ನು ಬಿತ್ತಿದ್ದಾನೆ. ಅವನ ಉಪದೇಶಗಳು ಸಾರ್ವಕಾಲಿಕ ಮೌಲ್ಯಗಳನ್ನು ಪಡೆದಿವೆ. ಕ್ರಿಸ್ತ ಜಯಂತಿಯನ್ನು ಆಚರಿಸುವುದರ ಮೂಲಕ ಕ್ರಿಸ್ತನ ಉಪದೇಶಗಳನ್ನು ನೆನಪಿಸಿಕೊಂಡು ನಿತ್ಯ ಜೀವನದಲ್ಲಿ ಅಳವಡಿಸಿಕೊಳ್ಳಬೇಕು’ ಎಂದು ಹೇಳಿದರು.