ಬೆಂಗಳೂರು:- ಹೃದಯಾಘಾತದಿಂದ ಕಂಟ್ರಾಕ್ಟರ್ಸ್ ಅಸೋಸಿಯೇಷನ್ನ ಉಪಾಧ್ಯಕ್ಷ ಅಂಬಿಕಾಪತಿ ಅವರು ನಿಧನ ಹೊಂದಿದ್ದಾರೆ.
ಐಟಿ ದಾಳಿಗೆ ಒಳಗಾದ ಬಳಿಕ ಸ್ವಲ್ಪ ಖಿನ್ನರಾಗಿದ್ದ ಅಂಬಿಕಾಪತಿ ಅವರು ಅದರ ಜತೆಗೆ ವಯೋಸಹಜ ಆರೋಗ್ಯ ಸಮಸ್ಯೆಗಳನ್ನೂ ಹೊಂದಿದ್ದರು. ಕಾವಲ್ ಭೈರಸಂದ್ರದಲ್ಲಿರುವ ಮನೆಯಲ್ಲಿ ಅವರು ಹೃದಯಾಘಾತಕ್ಕೆ ಒಳಗಾಗಿದ್ದು, ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ, ಅವರು ಸಂಜೆ 6.40ರ ಹೊತ್ತಿಗೆ ಮೃತಪಟ್ಟಿದ್ದಾರೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಅಕ್ಟೋಬರ್ 13ರಂದು ಮಾನ್ಯತಾ ಟೆಕ್ ಪಾರ್ಕ್ನ ಅಂಬಿಕಾಪತಿ ಅವರ ಮನೆ ಮತ್ತು ಬೆಂಗಳೂರಿನ ಆರ್ಟಿ ನಗರ ಸಮೀಪದ ಸುಲ್ತಾನ್ ಪಾಳ್ಯದಲ್ಲಿರುವ ಆತ್ಮಾನಂದ ಕಾಲೊನಿಯ ಅಂಬಿಕಾಪತಿ ಪುತ್ರ ಪ್ರದೀಪ್ ಅವರ ಮನೆಗೆ ದಾಳಿ ಮಾಡಲಾಗಿತ್ತು. ಪ್ರದೀಪ್ ಅವರ ಮನೆಯಲ್ಲಿ 500 ರೂ.ಯನ್ನು 22 ಬಾಕ್ಸ್ಗಳಲ್ಲಿ ಜೋಡಿಸಿಟ್ಟ ಸ್ಥಿತಿಯಲ್ಲಿ 42 ಕೋಟಿ ರೂ. ಪತ್ತೆಯಾಗಿತ್ತು. ಇದು ರಾಜ್ಯದ ಕಾಂಗ್ರೆಸ್ ನಾಯಕರಿಗೆ ಸೇರಿದ ಹಣ ಎಂದು ಆರೋಪ ಮಾಡಲಾಗಿತ್ತು. ಗುತ್ತಿಗೆದಾರರಿಗೆ ಬಿಡುಗಡೆ ಮಾಡಿದ ಹಣದಲ್ಲಿ ಪಡೆದ ಕಮಿಷನ್ ಹಣ ಇದಾಗಿದ್ದು, ಅದನ್ನು ತೆಲಂಗಾಣ ಚುನಾವಣೆಯಲ್ಲಿ ಖರ್ಚಿಗೆ ಕಳುಹಿಸಲು ಪ್ಲ್ಯಾನ್ ಮಾಡಲಾಗಿದೆ ಎಂದು ಆರೋಪಿಸಲಾಗಿತ್ತು.