ಬೆಂಗಳೂರು : ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ಶಿರಹಟ್ಟಿಯ ಫಕೀರೇಶ್ವರ ಮಠದ ದಿಂಗಾಲೇಶ್ವರ ಸ್ವಾಮೀಜಿ ಪಕ್ಷೇತರವಾಗಿ ಸ್ಪರ್ಧಿಸುವುದಾಗಿ ಘೋಷಿಸಿದ್ದಾರೆ. ಇದರಿಂದ ಹಾಲಿ ಸಂಸದ ಹಾಗೂ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಗೆ ದೊಡ್ಡ ಸವಾಲು ಎದುರಾಗಿದ್ದು, ಧಾರವಾಡ ಲೋಕಸಭಾ ಕ್ಷೇತ್ರ ರಾಜ್ಯದ ಗಮನ ಸೆಳೆಯುತ್ತಿದೆ. ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು,
ಅಧಿಕೃತವಾಗಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತೇನೆ. ರಾಜಕೀಯ ರಂಗವನ್ನು ಪ್ರವೇಶಿಸುತ್ತೇಣೆ ಎಂದು ಘೋಷಿಸಿದರು. ಅಧಿಕಾರದ ಮತ್ತು ಸಂಪತ್ತಿನ ಮದದಲ್ಲಿ ಪ್ರಹ್ಲಾದ್ ಜೋಶಿ ಬದುಕುತ್ತಿದ್ದಾರೆ. ಪ್ರಹ್ಲಾದ್ ಜೋಷಿ ಅವರ ಚೇಲಾಗಳು ಸಾಮಾಜಿಕ ಜಾಲತಾಣವನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ನನ್ನ ವಿರುದ್ಧ ಷಡ್ಯಂತ್ರ ಮಾಡ್ತಿದ್ದಾರೆ. ಪ್ರಹ್ಲಾದ್ ಜೋಷಿ ಅವರೇ ನಿಮ್ಮ ಯಾವುದೇ ಕುತಂತ್ರ ನಮ್ಮ ಮುಂದೆ ನಡೆಯಲ್ಲ ಎಂದು ಕಿಡಿಕಾರಿದರು.
ಪ್ರಹ್ಲಾದ್ ಜೋಶಿ ದುರಾಡಳಿತ ಬಗ್ಗೆ ಹೈಕಮಾಂಡ್ ನಾಯಕರು ಗಮನಹರಿಸಿತ್ತಿಲ್ಲ, ಅವರಿಗೆ ಅದೇ ಬೇಕಾಗಿದೆ ಅನ್ಸುತ್ತೆ. ಹೀಗಾಗಿ ಈ ದಿಂಗಾಲೇಶ್ವರ ರಾಜಕೀಯ ಪ್ರವೇಶ ಮಾಡಬೇಕಾಯಿತು. ಈ ಚುನಾವಣೆ ಎರಡು ರಾಷ್ಟ್ರೀಯ ಪಕ್ಷದ ವಿರುದ್ಧ ಸ್ವಾಭಿಮಾನದ ಯುದ್ಧ ಆಗಿದೆ. ಇದು ಮತದಾರರು ಮಾಡಿದ ತೀರ್ಮಾನ ಆಗಿದೆ. ಹೀಗಾಗಿ ನನಗೆ ಸ್ಪರ್ಧೆ ಮಾಡುವಂತೆ ಮತದಾರರು ಒತ್ತಾಯ ಮಾಡಿದ್ದಾರೆ ಎಂದರು.
ಬಿಎಸ್ ಯಡಿಯೂರಪ್ಪ ಅವರು ನನ್ನ ಜೊತೆಗೆ ಮಾತನಾಡಿದ್ದಾರೆ. ಯಡಿಯೂರಪ್ಪ ಹಾಗೂ ಜಗದೀಶ್ ಶೆಟ್ಟರ್ ಅವರು ಸ್ಪರ್ಧೆಯಿಂದ ಹಿಂದೆ ಸರಿಯಬೇಕು ಅಂತ ಮನವಿ ಮಾಡಿದ್ದಾರೆ. ಆದರೆ, ಕೆಲವರು ನನ್ನ ಸ್ಪರ್ಧೆ ಹಿಂದೆ ಯಡಿಯೂರಪ್ಪ ಹಾಗೂ ಜಗದೀಶ್ ಶೆಟ್ಟರ್ ಕೈವಾಡ ಇದೆ ಎಂದು ಹೇಳ್ತಿದ್ದಾರೆ. ಇದೆಲ್ಲಾ ಸುಳ್ಳು.. ನನ್ನ ವಿರುದ್ಧ ಯಾರೇ ಮಠಾಧೀಶರನ್ನು ಹೇಳಿಕೆ ಕೊಟ್ಟಿದ್ದರು ಅದು ಪ್ರಹ್ಲಾದ್ ಜೋಶಿ ಅವರ ಭಯಕ್ಕೆ ಕೊಟ್ಟಿದ್ದಾರೆ ಎಂದು ಕಿಡಿಕಾರಿದರು.