ಬೆಂಗಳೂರು:- ಸಾರಿಗೆ ನೌಕರರಿಗಾಗಿ ಕಲ್ಯಾಣ ಮಂಟಪ ನಿರ್ಮಾಣ ಮಾಡಲಾಗುತ್ತದೆ ಎಂದು ಸಚಿವ ರಾಮಲಿಂಗಾ ರೆಡ್ಡಿ ಹೇಳಿಕೆ ನೀಡಿದ್ದಾರೆ.
ಈ ಸಂಬಂಧ ಮಾತನಾಡಿದ ಅವರು,ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ನೌಕರರ ಅನುಕೂಲಕ್ಕಾಗಿ ಯಲಹಂಕ ವ್ಯಾಪ್ತಿಯಲ್ಲಿ ಕಲ್ಯಾಣ ಮಂಟಪವನ್ನು ನಿರ್ಮಿಸಲಾಗುವುದು. ಬಿಎಂಟಿಸಿ ಸೇರಿದಂತೆ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನೌಕರರು ಯಾವುದಾದರೂ ಶುಭ ಕಾರ್ಯ ಮಾಡಲು ಕಲ್ಯಾಣ ಮಂಟಪಕ್ಕೆ ಲಕ್ಷಾಂತರ ರೂ. ಖರ್ಚು ಮಾಡಬೇಕಿದೆ. ಅದಕ್ಕೆ ಪರಿಹಾರ ಎನ್ನುವಂತೆ ಬಿಎಂಟಿಸಿಯಿಂದಲೇ ಕಲ್ಯಾಣ ಮಂಟಪ ನಿರ್ಮಿಸುವ ಪ್ರಸ್ತಾವನೆಯಿದೆ. ಯಲಹಂಕ ಘಟಕ ವ್ಯಾಪ್ತಿಯಲ್ಲಿ ನಿಗಮಕ್ಕೆ ಸೇರಿದ ೧ ಎಕರೆ ಜಾಗವಿದ್ದು, ಅಲ್ಲಿ ಕಲ್ಯಾಣ ಮಂಟಪ ಸ್ಥಾಪನೆ ಮಾಡಲಾಗುವುದು. ಮುಂದಿನ ಒಂದು ವರ್ಷದಲ್ಲಿ ಕಲ್ಯಾಣ ಮಂಟಪ ನಿರ್ಮಾಣ ಕಾರ್ಯ ಪೂರ್ಣಗೊಳಿಸಲಾಗುವುದು ಎಂದರು.
ಬಿಎಂಟಿಸಿಯ ಟಿಟಿಎಂಸಿಗಳಲ್ಲಿ ನಿರ್ವಹಣೆ ಕೊರತೆಯಿದೆ. ೧೨ ವರ್ಷಗಳ ಹಿಂದೆ ನಿರ್ಮಿಸಲಾದ ಟಿಟಿಎಂಸಿಗಳಿಗೆ ಬಣ್ಣ ಬಳಿದಿಲ್ಲ. ಹೀಗಾಗಿ ಟಿಟಿಎಂಸಿಗಳು ಕಳೆಗುಂದಿದಂತೆ ಕಾಣುತ್ತಿವೆ. ಹೀಗಾಗಿ ಬಿಎಂಟಿಸಿಯ ಎಲ್ಲ ಟಿಟಿಎಂಸಿಗಳಿಗೂ ಬಣ್ಣ ಬಳಿಯಲು ಯೋಜನೆ ರೂಪಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಜತೆಗೆ ಟಿಟಿಎಂಸಿಗಳಲ್ಲಿನ ದುರಸ್ತಿ ಕಾರ್ಯವನ್ನೂ ಮಾಡಿಸುವಂತೆ ತಿಳಿಸಿದ್ದೇನೆ ಎಂದು ಹೇಳಿದರು.