ಧಾರವಾಡ: ಅದು ಬಡವರ ಪಾಲಿನ ಸಂಜೀವಿನಿ. ಕೇವಲ ಧಾರವಾಡ ಅಷ್ಟೇ ಅಲ್ಲದೇ ಬೇರೆ ಬೇರೆ ಜಿಲ್ಲೆಗಳಿಂದಲೂ ಬರುವ ರೋಗಿಗಳಿಗೆ ಸೂಕ್ತ ಚಿಕಿತ್ಸೆಯನ್ನು ಆ ಆಸ್ಪತ್ರೆ ನೀಡುತ್ತ ಬಂದಿದೆ. ಜನಸಂಖ್ಯೆ ಬೆಳೆದಂತೆಲ್ಲ ಆ ಆಸ್ಪತ್ರೆಯ ಆವರಣ ಚಿಕ್ಕದಾಗುತ್ತಿದೆ. ಅಲ್ಲದೇ ಸಿಕ್ಕಾಪಟ್ಟೆ ಜನಜಂಗುಳಿ ಅಲ್ಲಿ ಆಗುತ್ತಿದ್ದು, ಇದೀಗ ಸರ್ಕಾರ ಹಾಗೂ ಜಿಲ್ಲಾಡಳಿತ ಹೆಚ್ಚುವರಿಯಾಗಿ ಮತ್ತೊಂದು ಕಡೆ ಅದೇ ರೀತಿಯ ಆಸ್ಪತ್ರೆ ತೆರೆಯಲು ಚಿಂತನೆ ನಡೆಸುತ್ತಿದೆ.
ಇಷ್ಟಕ್ಕೂ ಅದು ಯಾವ ಆಸ್ಪತ್ರೆ ಅಂತೀರಾ? ಇಲ್ಲಿದೆ ನೋಡಿ ಡೀಟೆಲ್ಸ್.
ಇದು ಧಾರವಾಡದ ಜಿಲ್ಲಾ ಆಸ್ಪತ್ರೆ. ಈ ಆಸ್ಪತ್ರೆ ಬಡವರ ಪಾಲಿನ ಸಂಜೀವಿನಿ. ಚಿಕ್ಕ ಮಕ್ಕಳಿಂದ ಹಿಡಿದು, ಗರ್ಭಿಣಿಯರು, ವಯೋವೃದ್ಧರಿಗೂ ಇಲ್ಲಿ ಚಿಕಿತ್ಸೆ ಕೊಡಲಾಗುತ್ತದೆ. ಹೀಗಾಗಿಯೇ ಈ ಆಸ್ಪತ್ರೆಯನ್ನು ಬಡವರ ಪಾಲಿನ ಸಂಜೀವಿನಿ ಎಂದು ಕರೆಯಲಾಗುತ್ತಿದೆ. ಆದರೆ, ದಿನ ಕಳೆದಂತೆ ಈ ಆಸ್ಪತ್ರೆಗೆ ಬರುವ ರೋಗಿಗಳ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಸದ್ಯ ಇರುವ ಈ ಆಸ್ಪತ್ರೆಯಲ್ಲಿ ದಿನೇ ದಿನೇ ಜನಜಂಗುಳಿ ಹೆಚ್ಚಾಗುವುದರ ಜೊತೆಗೆ ಜಾಗದ ಕೊರತೆ ಕೂಡ ಎದ್ದು ಕಾಣುತ್ತಿದೆ.
ಹೀಗಾಗಿಯೇ ಈ ಆಸ್ಪತ್ರೆಯನ್ನು ಕೇವಲ ಚಿಕ್ಕಮಕ್ಕಳು, ಬಾಣಂತಿಯರು ಹಾಗೂ ಗರ್ಭಿಣಿಯರಿಗೆ ಮಾತ್ರ ಮೀಸಲಿಟ್ಟು, ಉಳಿದೆಲ್ಲ ರೋಗಿಗಳಿಗೆ ಪ್ರತ್ಯೇಕವಾಗಿ ಆಸ್ಪತ್ರೆ ನಿರ್ಮಿಸುವ ಬಗ್ಗೆ ಜಿಲ್ಲಾಡಳಿತ ಮತ್ತು ಸರ್ಕಾರ ಚಿಂತನೆ ನಡೆಸಿದೆ. ಈ ಬಗ್ಗೆ ಇತ್ತೀಚೆಗಷ್ಟೆ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿದ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಪರಶುರಾಮ ದೊಡಮನಿ ಅವರು ಕೂಡ ಇನ್ನೊಂದು ಆಸ್ಪತ್ರೆಯನ್ನು ಪ್ರತ್ಯೇಕವಾಗಿ ಮಾಡುವುದು ಸೂಕ್ತ ಎಂದಿದ್ದಾರೆ.
ಬೇರೆ ಜಾಗದಲ್ಲಿ ಧಾರವಾಡಕ್ಕೆ ಇನ್ನೊಂದು ಪ್ರತ್ಯೇಕ ಜಿಲ್ಲಾ ಆಸ್ಪತ್ರೆ ಮಾಡುವುದಷ್ಟೇ ಅಲ್ಲ. ಅದರ ಜೊತೆಗೆ ವೈದ್ಯಕೀಯ ಕಾಲೇಜನ್ನು ಮಾಡುವ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸಿದ್ದೇವೆ. ಇದರಿಂದ ವಿದ್ಯಾರ್ಥಿಗಳಿಗೂ ಅನುಕೂಲ ಆಗಲಿದೆ. ಜೊತೆಗೆ ಹಳೆಯ ಜಿಲ್ಲಾ ಆಸ್ಪತ್ರೆಯಲ್ಲಿ ಉಂಟಾಗುತ್ತಿರುವ ಜನಸಂದಣಿಗೂ ಕಡಿವಾಣ ಹಾಕಿದಂತಾಗುತ್ತದೆ ಎಂಬುದು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಅವರ ಅಭಿಪ್ರಾಯ. ಒಟ್ಟಾರೆ ಧಾರವಾಡಕ್ಕೆ ಇನ್ನೊಂದು ಹೊಸ ಜಿಲ್ಲಾ ಆಸ್ಪತ್ರೆ ಮಾಡಿದ್ದೇ ಆದಲ್ಲಿ ಹಳೆಯ ಜಿಲ್ಲಾ ಆಸ್ಪತ್ರೆಯಲ್ಲಿನ ಜನದಟ್ಟನೆ ಕಡಿಮೆಯಾಗಲಿದೆ. ಈ ಬಗ್ಗೆ ಸರ್ಕಾರ ಹಾಗೂ ಜಿಲ್ಲಾಡಳಿತ ಚಿಂತನೆ ನಡೆಸುತ್ತಿದ್ದು, ಆಸ್ಪತ್ರೆ ನಿರ್ಮಾಣ ಕಾರ್ಯಕ್ಕೆ ಯಾವಾಗ ಮುಹೂರ್ತ ಕೂಡಿ ಬರಲಿದೆಯೋ ಕಾದು ನೋಡಬೇಕಿದೆ.