ಬೆಂಗಳೂರು: ಬೆಂಗಳೂರಿನ ಕೂಡ್ಲು ಬಳಿ ಅಕ್ಟೋಬರ್ ತಿಂಗಳಲ್ಲಿ ಚಿರತೆ ಕಾಣಿಸಿಕೊಂಡು ಆತಂಕ ಸೃಷ್ಟಿಯಾಗಿತ್ತು,ಬಳಿಕ ಅರಣ್ಯ ಇಲಾಖೆ ಕಾರ್ಯಾಚರಣೆ ನಡೆಸುವ ವೇಳೆ ಗುಂಡು ಚಿರತೆಗೆ ತಗುಲಿ ಮತಪಟ್ಟಿತ್ತು.
ಇದಾದ ಬಳಿಕ ಈಗ ಆನೇಕಲ್ ತಾಲ್ಲೂಕಿನಲ್ಲಿ ಪದೇ ಪದೇ ಕಾಣಿಸಿಕೊಂಡು ಆತಂಕ ಸೃಷ್ಟಿ ಮಾಡುತ್ತಿದ್ದು,ಕಳೆದ ಒಂದು ವಾರದಿಂದ ಆನೇಕಲ್ ತಾಲ್ಲೂಕಿನಲ್ಲಿ ರಾತ್ರಿ ಸಮಯದಲ್ಲಿ ಚಿರತೆ ಕಾಣಿಸಿಕೊಳ್ಳುತ್ತಿದ್ದು,ಕಳೆದ ವಾರ ಗಟ್ಟಹಳ್ಳಿ ಗ್ರಾಮದಲ್ಲಿ ಮನೆಯ ಕಾಂಪೌಂಡ್ ಬಳಿ ಇದ್ದ ಕೋಳಿಗಳನ್ನು ತಿಂದು ಹಾಕಿತ್ತು, ಗ್ರಾಮದ ಪಕ್ಕದಲ್ಲಿನ ನೀಲಗಿರಿ ತೋಪಿನಲ್ಲಿ ಬೋನ್ ಇಡಲಾಗಿದೆ,ಆದ್ರೆ ಅದಾದ ಬಳಿಕ ಪಕ್ಕದ ಗ್ರಾಮ ಮದ್ದೂರಮ್ಮ ದೇವಾಲಯದ ಬಳಿ ಕಾಣಿಸಿ ಕೊಂಡು ಎರಡು ದಿನದ ಹಿಂದೆ ಮತ್ತೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೋಪಸಂದ್ರ ಬಳಿ ಚಿರತೆ ಹೋಗುತ್ತಿದ್ದ ವೇಳೆ ಸ್ಥಳೀಯರ ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದು ನಿನ್ನೆ ರಾತ್ರಿ ಚಂದಾಪುರ ಸಮೀಪದ ಹೀಲಲಗೆ ಬಳಿ ಸರ್ಕಾರಿ ಶಾಲೆಯ ಹಿಂಬಾಗದ ಗಜೇಂದ್ರ ಎಂಬುವವರ ಮನೆಯ ಪಕ್ಕದಲ್ಲೇ ಹೋಗಿದೆ.
ಇಂದು ಬೆಳಿಗ್ಗೆ ಗ್ರಾಮಸ್ಥರು ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಮಾಹಿತಿ ತಿಳಿಸಿದ್ದಾರೆ. ಸ್ಥಳಕ್ಕೆ ಬಂದ ಅರಣ್ಯ ಇಲಾಖೆಯ ಅಧಿಕಾರಿಗಳು ಸ್ಥಳೀಯರಿಂದ ಮಾಹಿತಿ ಪಡೆದಿದ್ದು,ಚಿರತೆ ಓಡಾಡಿರುವ ಹೆಜ್ಜೆ ಗುರುತು ಎಲ್ಲಿಯೂ ಕಂಡು ಬಂದಿಲ್ಲ.ಸದ್ಯ ಗ್ರಾಮದಲ್ಲಿನ ಜನರಿಗೆ ಹೊರಗೆ ಓಡಾಡುವಾಗ ಎಚ್ಚರಿಕೆಯಿಂದ ಇರಬೇಕು ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ತಾಲ್ಲೂಕಿನ ಒಂದಲ್ಲ ಒಂದು ಕಡೆ ಚಿರತೆ ಕಾಣಿಸಿಕೊಳ್ಳುತ್ತಿರುವುದರಿಂದ ಸಾರ್ವಜನಿಕರು ಸಾಮಾಜಿಕ ತಾಣಗಳಲ್ಲಿ ಚಿರತೆಯದ್ದೇ ಚರ್ಚೆ ಶುರುಮಾಡಿಕೊಂಡಿದ್ದಾರೆ.