ಬೆಂಗಳೂರು:– ಕುಟುಂಬ ರಾಜಕಾರಣ ಆರೋಪ ಮಾಡುವ ಕಾಂಗ್ರೆಸ್ ಗೆ ನಾಚಿಕೆ ಆಗಬೇಕು ಎಂದು ಛಲವಾದಿ ನಾರಾಯಣಸ್ವಾಮಿ ಹೇಳಿದ್ದಾರೆ.
ಈ ಸಂಬಂಧ ಮಾತನಾಡಿದ ಅವರು,ನಕಲಿ ಗಾಂಧಿ ಕುಟುಂಬದ ಪಾದರಕ್ಷೆ ತಲೆ ಮೇಲೆ ಹೊತ್ತು ಕಾಲು ಸವೆಸಿಕೊಂಡಿರುವ ಕಾಂಗ್ರೆಸ್ನವರು ಬಿಜೆಪಿ ವಿರುದ್ಧ ಕುಟುಂಬ ರಾಜಕಾರಣ ಆರೋಪ ಮಾಡುತ್ತಿರುವುದು ನಾಚಿಕೆಗೇಡಿನ ಕೆಲಸ. ಈ ಗುಲಾಮರಿಗೆ ಮುಂದಿನ ದಿನಗಳಲ್ಲಿ ಬುದ್ಧಿ ಕಲಿಸುವ ಕಾಲ ಬರಲಿದೆ. ಅದಕ್ಕೆ ಉತ್ತರ ಬಿಜೆಪಿಯ ಕಾರ್ಯಕರ್ತರು ಕೊಡಲಿದ್ದಾರೆ ಎಂದರು.
ವಿಜಯೇಂದ್ರ ಅವರಿಗೆ ಅವಕಾಶ ನೀಡುವ ಮೂಲಕ ಕುಟುಂಬ ರಾಜಕಾರಣಕ್ಕೆ ಬಿಜೆಪಿ ಜೋತುಬಿದ್ದಿದೆ ಎಂದು ಕಾಂಗ್ರೆಸ್ ಆರೋಪಿಸಿದೆ. ಆದರೆ ಇಲ್ಲಿ ಯಾವುದೋ ಒಂದು ಅಕಸ್ಮಾತ್ ಒಬ್ಬ ಕಾರ್ಯಕರ್ತ ಒಬ್ಬ ಹಿರಿಯ ಮುತ್ಸದ್ಧಿ ಮಗ ಆಗಿದ್ದ ಎನ್ನುವ ಕಾರಣಕ್ಕೆ ಅವಕಾಶ ಕೊಟ್ಟಾಗ ಈ ರೀತಿ ಮಾತನಾಡುತ್ತೀರಲ್ಲ, ನೀವು ಇಂದು ಎಣಿಕೆ ಮಾಡಿ ನೋಡಿ ಎಷ್ಟು ಜನ ಶಾಸಕರು ನಿಮ್ಮ ನಿಮ್ಮ ಕುಟುಂಬಗಳಿಂದ ಮಾತ್ರ ಬಂದಿದ್ದಾರೆ? ಎಷ್ಟು ಜನ ಮಂತ್ರಿಗಳು ಕುಟುಂಬದ ಮಂತ್ರಿಗಳಿದ್ದಾರೆ? ಎಂದು ಮೆಲುಕು ಹಾಕಿ ನೋಡಿ ಎಂದು ಹೇಳಿದ್ದಾರೆ.
ಕಾಂಗ್ರೆಸ್ನವರ ಬಾಯಲ್ಲಿ ಈ ಮಾತು ಬರಬಾರದು. ಯಾಕೆಂದರೆ ಒಂದು ಕುಟುಂಬದ ಗುಲಾಮಗಿರಿ ಮಾಡುವ ಈ ಕಾಂಗ್ರೆಸ್ಸಿಗರು ಆ ಒಂದು ಕುಟುಂಬದ ಪಾದರಕ್ಷೆ ಹೊತ್ತು ಇಲ್ಲಿಯವರೆಗೂ ಕಾಲು ಸವೆಸಿದ್ದಾರೆ. ಅಂಥವರು ಇಂದು ಬಿಜೆಪಿಯ ಮೇಲೆ ಆಪಾದನೆ ಮಾಡುತ್ತಿದ್ದಾರೆ. ಅವರಿಗೆ ನಾಚಿಕೆಯಾಗಬೇಕು. ಒಬ್ಬ ಉತ್ತಮ ಕಾರ್ಯಕರ್ತನನ್ನು ಗುರುತಿಸಿ ಬಿಜೆಪಿ ಜವಾಬ್ದಾರಿ ಕೊಟ್ಟಿದೆ. ಆದರೆ, ಕಾಂಗ್ರೆಸ್ನವರು ನಕಲಿ ಗಾಂಧಿ ಕುಟುಂಬದ ಪಾದರಕ್ಷೆ ಹೊತ್ತು ಇಂತಹ ಮಾತು ಆಡುತ್ತಿದ್ದಾರೆ ಎಂದು ಟೀಕಿಸಿದ್ದಾರೆ.