ಬೆಳಗಾವಿ: ಕುಂದಾನಗರಿ ಬೆಳಗಾವಿ ಐತಿಹಾಸಿಕ ಗಾಂಧಿ ಭಾರತ ಕಾರ್ಯಕ್ರಮಕ್ಕೆ ಸಜ್ಜಾಗಿದೆ. ಗಾಂಧೀಜಿ, ಅಂಬೇಡ್ಕರ್ ವಿಚಾರಧಾರೆ ಮುಂದಿಟ್ಟುಕೊಂಡು ಕೈ ನಾಯಕರ ರಣಕಹಳೆ ಮೊಳಗಿಸಲಿದ್ದಾರೆ. ಬೆಳಗಾವಿ ನಗರ ಸಂಪೂರ್ಣ ಕಾಂಗ್ರೆಸ್ ಮಯವಾಗಿದ್ದು, ನಗರದ ಪ್ರಮುಖ ರಸ್ತೆಗಳಲ್ಲಿ ಕಾಂಗ್ರೆಸ್ ಬಾವುಟ, ಕೈ ನಾಯಕರ ಕಟೌಟ್ ರಾರಾಜೀಸುತ್ತಿವೆ. ಸಂವಿಧಾನ ರಕ್ಷಣೆಗಾಗಿ ದೇಶ್ಯಾದ್ಯಂತ ಹೋರಾಟಕ್ಕೆ ಬೆಳಗಾವಿಯಿಂದಲೇ ಚಾಲನೆ ನೀಡಲಿದೆ. 1924ರಲ್ಲಿ ಬೆಳಗಾವಿಯಿಂದ ಸ್ವಾತಂತ್ರ್ಯ ಹೋರಾಟಕ್ಕೆ ವೇಗ ಸಿಕ್ಕಿತ್ತು. ಅಂದು ಮಹಾತ್ಮಾ ಗಾಂಧಿ ಅಧ್ಯಕ್ಷತೆಯ ಮೊದಲ ಕಾಂಗ್ರೆಸ್ ಅಧಿವೇಶನಕ್ಕೆ ಬೆಳಗಾವಿ ಸಾಕ್ಷೀಕರಿಸಿತ್ತು. ಇಂದು ಬೆಳಗಾವಿ ಕಾಂಗ್ರೆಸ್ ಅಧಿವೇಶನ ಶತಮಾನೋತ್ಸವ ಪ್ರಯುಕ್ತ ಬಿಜೆಪಿ ವಿರುದ್ಧ ಜನಾಂದಲೋನಕ್ಕೆ ಕಾಂಗ್ರೆಸ್ ಪ್ಲಾನ್ ಮಾಡಿದ್ದು, ಗಾಂಧಿ ಭಾರತ ಕಾರ್ಯಕ್ರಮ ಆಯೋಜಿಸಿದೆ.
ಮೊದಲಿಗೆ ಸುವರ್ಣ ವಿಧಾನ ಸೌಧದಲ್ಲಿ ಬೆಳಗ್ಗೆ 10. 30 ಕ್ಕೆ ಸರ್ಕಾರಿ ಕಾರ್ಯಕ್ರಮ ನಡೆಯಲಿದ್ದು, ಮಧ್ಯಾಹ್ನ 1 ಗಂಟೆಗೆ ಬೆಳಗಾವಿ ಸಿಪಿಎಡ್ ಮೈದಾನದಲ್ಲಿ ಜೈ ಬಾಪು, ಜೈ ಭೀಮ, ಜೈ ಸಂವಿಧಾನ ಜನ ಸಮಾವೇಶ ನಡೆಯಲಿದೆ. ಸರ್ಕಾರಿ ಮತ್ತು ಪಕ್ಷದ ಕಾರ್ಯಕ್ರಮದಲ್ಲಿ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ. ಕೆ.ಶಿವಕುಮಾರ್, ಸಚಿವ ಸತೀಶ್ ಜಾರಕಿಹೊಳಿ ಸೇರಿದಂತೆ ದೇಶದ ಎಲ್ಲಾ ರಾಜ್ಯದಿಂದ ಸಂಸದರು, ಶಾಸಕರು, ಪಿಸಿಸಿ ಅಧ್ಯಕ್ಷ ಸೇರಿ ಪ್ರಮುಖ ನಾಯಕರು ಭಾಗಿಯಾಗಲಿದ್ದಾರೆ.
ತ್ರಿವಿಧ ದಾಸೋಹಿಗೆ 6ನೇ ಪುಣ್ಯಸ್ಮರಣೆ: ಇಂದು ಸಿದ್ಧಗಂಗಾ ಮಠದಲ್ಲಿ ಸಂಸ್ಮರಣೋತ್ಸವ!
ಸುವರ್ಣ ವಿಧಾನಸೌಧದಲ್ಲಿ ಗಾಂಧೀಜಿ ಪ್ರತಿಮೆ ಲೋಕಾರ್ಪಣೆ ಕಾರ್ಯಕ್ರಮ ನಡೆಯಲಿದೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಗಾಂಧಿ ಪ್ರತಿಮೆ ಅನಾವರಣಗೊಳಿಸಿದ್ದಾರೆ. ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಘನ ಉಪಸ್ಥಿತರಿರಲಿದ್ದಾರೆ. ಸ್ಪೀಕರ್, ಸಚಿವರು, ಶಾಸಕರ ಸೇರಿ ಆಡಳಿತ ವಿಪಕ್ಷ ನಾಯಕರಿಗೂ ಆಹ್ವಾನ ನೀಡಲಾಗಿದ್ದು, ಇದೇ ಸಂದರ್ಭದಲ್ಲಿ ಸಾಧಕ ರೈತರು, ಸ್ವಾತಂತ್ರ್ಯ ಹೋರಾಟಗಾರ ಜೊತೆಗೆ ಫೋಟೋ ಕಾರ್ಯಕ್ರಮವು ಇದೆ.
ಇದಾದ ಬಳಿಕ ಬೆಳಗಾವಿಯಲ್ಲಿ ಕಾಂಗ್ರೆಸ್ ಶಕ್ತಿ ಪ್ರದರ್ಶನ ನಡೆಸಲಿದೆ.. ಸರ್ಕಾರಿ ಕಾರ್ಯಕ್ರಮದ ಬಳಿಕ ನಗರದ ಸಿಪಿಎಡ್ ಮೈದಾನದಲ್ಲಿ ಕಾಂಗ್ರೆಸ್ ಜನ ಸಮಾವೇಶ ನಡೆಯಲಿದೆ. ಕಾಂಗ್ರೆಸ್ ಸಮಾವೇಶ ಹಿನ್ನೆಲೆ ಬೆಳಗಾವಿಯಲ್ಲಿ ಬಿಗಿ ಪೊಲೀಸ್ ಭದ್ರತೆ ನಿಯೋಜಿಸಿದ್ದು, 3500 ಜನ ಪೊಲೀಸ್ ಅಧಿಕಾರಿ, ಸಿಬ್ಬಂದಿ ಭದ್ರತೆ ಗೆ ನಿಯೋಜನೆ ಮಾಡಲಾಗಿದೆ.