ಚಿಕ್ಕಮಗಳೂರು:- ಮಕ್ಕಳಲ್ಲಿ ಕೋಮುವಾದದ ವಿಷ ಬೀಜ ಬಿತ್ತುವ ಕೆಲಸವನ್ನು ಕಾಂಗ್ರೆಸ್ ಮಾಡುತ್ತಿದೆ ಎಂದು ಮಾಜಿ ಶಾಸಕ ಸಿಟಿ ರವಿ ಹೇಳಿದ್ದಾರೆ.
ಈ ಸಂಬಂಧ ಮಾತನಾಡಿದ ಅವರು,ಸಿಎಂ ಸಿದ್ದರಾಮಯ್ಯ ತಮ್ಮ ರಾಜಕೀಯ ಲಾಭಕ್ಕೆ ಸಮಾಜದಲ್ಲಿನ ಶಾಂತಿ ಕದಡಿ ರಾಜಕೀಯ ಲಾಭ ಪಡೆಯುವ ಸಂಚು ಹೂಡಿದ್ದು ಅದು ಅವರ ಹೇಳಿಕೆಯಲ್ಲಿ ವ್ಯಕ್ತವಾಗಿದೆ ಎಂದರು.
ಶಾಲೆಯಲ್ಲಿ ಸಮವಸ್ತ್ರ ಇರಬೇಕೋ, ಬೇಡವೋ ಎನ್ನುವುದು ಚರ್ಚೆಯ ವಿಷಯವಾಗಬಾರದು. ಶಾಲಾ-ಕಾಲೇಜುಗಳಲ್ಲಿ ಸಮವಸ್ತ್ರ ಯಾವ ಉದ್ದೇಶಕ್ಕೆ ತಂದಿದ್ದಾರೆ ಎಂಬುದನ್ನು ಅರ್ಥೈಸಿಕೊಳ್ಳಬೇಕು. ಇದು ಅರ್ಥ ಮಾಡಿಕೊಳ್ಳದೆ ಶಾಲಾ-ಕಾಲೇಜು ಮಕ್ಕಳಲ್ಲಿಯೂ ಜಾತಿ ಮತ್ತು ಕೋಮುವಾದದ ವಿಷ ಬೀಜ ಬಿತ್ತುವ ಕೆಲಸವನ್ನು ಕಾಂಗ್ರೆಸ್ ಮಾಡುತ್ತಿದೆ.
ಶಾಲಾ ಮಕ್ಕಳಲ್ಲಿ ವಿಷ ಬೀಜ ಬಿತ್ತುವುದು, ಕೋಮುವಾದ ಬಿತ್ತುವುದು ಅದೊಂದು ರಾಷ್ಟ್ರಘಾತಕ ಕೆಲಸ. ಮಹಮದ್ ಆಲಿ ಜಿನ್ನಾ ಮತ್ತು ಕಾಂಗ್ರೆಸ್ ಮನಸ್ಥಿತಿ ಬೇರೆ ಬೇರೆಯಲ್ಲ. ಜಿನ್ನಾ ಕೂಡ ಪ್ರತ್ಯೇಕತೆ ಭಾವನೆಯನ್ನು ಬಿತ್ತಿ ಬೆಳೆಸಿ, ಆ ಮೂಲಕ ಭಾರತದ ವಿಭಜನೆಗೆ ಕಾರಣನಾದ. ಇವತ್ತು ಕಾಂಗ್ರೆಸ್ ತನ್ನ ರಾಜಕೀಯ ಲಾಭಕ್ಕೆ ಶಾಲಾ ಮಕ್ಕಳಲ್ಲೂ ಪ್ರತ್ಯೇಕತೆ ಭಾವನೆ ಬಿತ್ತಿ ಸಮಾಜವನ್ನು ಒಡೆಯುತ್ತಿದೆ. ಇದು ಅಕ್ಷಮ್ಯ ಅಪರಾಧ. ಈ ಮನಸ್ಥಿತಿಯನ್ನು ಇತಿಹಾಸ ಮತ್ತು ವರ್ತಮಾನವೂ ಕ್ಷಮಿಸುವುದಿಲ್ಲ ಎಂದರು.