ಯಾದಗಿರಿ:- ಮಂಡ್ಯದಲ್ಲಿ ಹನುಮಧ್ವಜ ತೆರವು ವಿಚಾರಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಕಿಡಿಕಾರಿದ್ದಾರೆ
ಈ ಸಂಬಂಧ ಮಾತನಾಡಿದ ಅವರು,ಕೆರಗೋಡು ಗ್ರಾಮ ಪಂಚಾಯಿತಿ ಸದಸ್ಯರು 108 ಅಡಿಯ ಧ್ವಜಸ್ಥಂಭದಲ್ಲಿ ಹನುಮಧ್ವಜ ಹಾರಿಸಲು ತೀರ್ಮಾನಿಸಿದ್ದರು. ಪೊಲೀಸರು ನುಗ್ಗಿ ಗ್ರಾಮಸ್ಥರ ಮೇಲೆ ಲಾಠಿ ಚಾರ್ಜ್ ಮಾಡಿ ಧ್ವಜ ಇಳಿಸಿದ್ದಾರೆ. ಸರ್ಕಾರ ಪೊಲೀಸರಿಂದ ರಾಜ್ಯದಲ್ಲಿ ಗೂಂಡಾಗಿರಿ ನಡೆಸುತ್ತಿದೆ. ಅಮಾಯಕರ ಮೇಲೆ ಇವತ್ತು ಲಾಠಿ ಚಾರ್ಜ್ ಮಾಡಿದ್ದಾರೆ ಇದು ಖಂಡನೀಯ ಎಂದಿದ್ದಾರೆ
ವಿಪಕ್ಷ ನಾಯಕ ಆರ್. ಅಶೋಕ್ ಹಾಗೂ ಪ್ರೀತಂ ಗೌಡ ಅವರು ಭೇಟಿ ನೀಡಿದಾಗ ಮತ್ತೊಮ್ಮೆ ಲಾಠಿ ಚಾರ್ಜ್ ಮಾಡಿಸಿದ್ದಾರೆ. ಅವರನ್ನು ಅರೆಸ್ಟ್ ಮಾಡಿಸಿರೋದು ಖಂಡನೀಯ. ಈ ಘಟನೆ ಖಂಡಿಸಿ ನಾಳೆ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಬಿಜೆಪಿ ಪ್ರತಿಭಟನೆ ನಡೆಸಲಿದೆ. ಬಳಿಕ ಜಿಲ್ಲಾಧಿಕಾರಿಗಳ ಮೂಲಕ ಮನವಿ ಕೊಡಲಿದ್ದೇವೆ. ಮುಂದಿನ ದಿನಗಳಲ್ಲಿ ಯಾವ ರೀತಿ ಹೋರಾಟ ಕೈಗೊಳ್ಳಬೇಕು ಎಂಬುದನ್ನ ಚರ್ಚಿಸುತ್ತೇವೆ ಎಂದಿದ್ದಾರೆ.
ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಡಿಸುವ ಕೆಲಸವನ್ನು ರಾಜ್ಯ ಸರ್ಕಾರ ಮಾಡುತ್ತಿದೆ. ಪೊಲೀಸರು ಹೋಗಿ ಏಕಾಏಕಿ ಲಾಠಿ ಚಾರ್ಜ್ ಮಾಡಿ, ದ್ವಜ ತೆಗೆಯೋ ಅವಶ್ಯಕತೆ ಏನಿತ್ತು? ಲೋಕಸಭಾ ಚುನಾವಣೆ ವೇಳೆ ಸರ್ಕಾರದ ಬೇಳೆ ಬೇಯೋದಿಲ್ಲ ಎಂದು ಸರ್ಕಾರ ಹುಚ್ಚುಚ್ಚಾಗಿ ನಡೆದುಕೊಳ್ಳುತ್ತಿದೆ. ಇದಕ್ಕೆ ಮುಂದಿನ ದಿನಗಳಲ್ಲಿ ತಕ್ಕ ಉತ್ತರ ನೀಡುತ್ತೇವೆ. ರಾಮಮಂದಿರ ಉದ್ಘಾಟನೆ ಬಳಿಕ ಇಡೀ ದೇಶದಲ್ಲಿ ಕಾಂಗ್ರೆಸ್ ತನ್ನ ಅಸ್ತಿತ್ವ ಕಳೆದುಕೊಳ್ಳುವ ಭಯದಲ್ಲಿದೆ. ಹೀಗಾಗಿ ಈ ರೀತಿ ನಡೆದುಕೊಳ್ಳುತ್ತಿದೆ ಎಂದಿದ್ದಾರೆ.
ಕರ್ನಾಟಕ ರಾಜ್ಯ ಶಾಂತಿಯುತವಾಗಿದೆ. ರಾಮ ಭಕ್ತರ ಮೇಲೆ ದಬ್ಬಾಳಿಕೆ ಮಾಡುವ ಕೆಲಸ ಮಾಡದೆ, ಎಚ್ಚೆತ್ತುಕೊಳ್ಳಬೇಕು. ರಾಮ ಭಕ್ತರಿಗೆ ಬೆಂಕಿ ಹಚ್ಚುವ ಕಾರ್ಯ ಮಾಡಿದರೆ ಅದಕ್ಕೆ ತಕ್ಕ ಉತ್ತರ ಕೊಡಬೇಕಾಗುತ್ತದೆ. ಏನಾದರೂ ಹೆಚ್ಚು ಕಡಿಮೆ ಆದರೆ ಅದಕ್ಕೆ ಸರ್ಕಾರವೇ ಹೊಣೆಯಾಗುತ್ತದೆ ಎಂದು ಅವರು ಎಚ್ಚರಿಸಿದ್ದಾರೆ