ಬೆಂಗಳೂರು : ಅಧಿಕಾರಕ್ಕೆ ಬಂದ ಆರು ತಿಂಗಳಲ್ಲೇ 18.50 ಕೋಟಿ ಜಾಹೀರಾತು ನೀಡಿ ಪ್ರಚಾರ ಗಿಟ್ಟಿಸಿಕೊಂಡ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ಕಿಡಿಕಾರಿದೆ.
ಈ ಕುರಿತು ಟ್ವೀಟ್ ಮಾಡಿರುವ ರಾಜ್ಯ ಬಿಜೆಪಿ, ‘ಬರದಿಂದ ಬಸವಳಿದ ರೈತರ ಪರಿಹಾರಕ್ಕೆ ಹಣವಿಲ್ಲ. ಆದರೆ, ಜಾಹೀರಾತು ಕೊಟ್ಟು ಬಿಟ್ಟಿ ಪ್ರಚಾರ ಪಡೆಯಲು ಮಾತ್ರ ಸ್ವಯಂ ಘೋಷಿತ ಆರ್ಥಿಕ ತಜ್ಞ ಅಲಿಯಾಸ್ ಮಜವಾದಿ ಸಿದ್ದರಾಮಯ್ಯ ಅವರ ಬಳಿ ಕೋಟಿ ಕೋಟಿ ಹಣವಿದೆ’ ಎಂದು ಕುಟುಕಿದೆ.
‘ಅಭಿವೃದ್ಧಿ ಮಾಡಲು ಸರ್ಕಾರದ ಬಳಿ ಹಣವಿಲ್ಲ. ಘೋಷಿಸಿದ ಗ್ಯಾರಂಟಿಗಳನ್ನು ನೀಡುವುದಕ್ಕೂ ಹಣವಿಲ್ಲ. ಶಾಸಕರಿಗೆ ಅನುದಾನ ಕೊಡುವುದಕ್ಕೂ ಹಣವಿಲ್ಲ. ಭಲೇ ಭಲೆ ಮಜವಾದಿ ಸಿದ್ದರಾಮಯ್ಯ ಸರ್ಕಾರ’ ಎಂದು ಸಿದ್ದರಾಮಯ್ಯ ಸರ್ಕಾರವನ್ನು ಮೂದಲಿಸಿದೆ.
‘ಆರು ತಿಂಗಳಲ್ಲಿ ಸರ್ಕಾರದ ಸಾಧನೆ ಏನೇನೂ ಇಲ್ಲ. ಆದರೂ ಕೂಡ ಜಾಹೀರಾತಿಗಾಗಿ ಬರೊಬ್ಬರಿ 18.50 ಕೋಟಿ ರೂ. ವ್ಯಯ ಮಾಡಲಾಗಿದೆ. ಕಾಂಗ್ರೆಸ್ ಶೋಕಿ, ಮೋಜು, ಮಸ್ತಿ ಮಾಡುತ್ತಿದೆ. ಇಲ್ಲದ ವಿವಾದಗಳನ್ನು ಮುನ್ನಲೆಗೆ ತಂದು ಧರ್ಮ ಧರ್ಮಗಳ ನಡುವೆ, ಜಾತಿ ಜಾತಿಗಳ ನಡುವೆ ಬೆಂಕಿ ಹಚ್ಚಿ ಚಳಿ ಕಾಯಿಸುತ್ತಿದೆ ಎಂದು ಛೇಡಿಸಿದೆ.