ಬೆಂಗಳೂರು: ಶಿಗ್ಗಾವಿ ವಿಧಾನಸಭಾ ಮತಕ್ಷೇತ್ರದಲ್ಲಿ ಕಾಂಗ್ರೆಸ್ ಎಂದಿಗೂ ಒಳ ಒಪ್ಪಂದ ಮಾಡಿಕೊಂಡಿಲ್ಲ ಎಂದು ಶಾಸಕ ಹಾಗೂ ಸ್ಲಂ ಬೋರ್ಡ್ ಅಧ್ಯಕ್ಷ ಪ್ರಸಾದ ಅಬ್ಬಯ್ಯ ಹೇಳಿದರು.ಗುರುವಾರ ಸುದ್ದಿಗಾರೊಂದಿರೆ ಮಾತನಾಡಿದ ಅವರು, ಪಕ್ಷದ ಹೈಕಮಾಂಡ್ ಈಗಾಗಲೇ ಶಿಗ್ಗಾಂವಿ ವಿಧಾನಸಭಾ ಮತಕ್ಷೇತ್ರದಿಂದ ಯಾಸಿರ್ ಅಹ್ಮದ್ ಖಾನ್ ಪಠಾಣ್ ಅವರನ್ನು ಅಖಾಡಕ್ಕಿಸಲು ತೀರ್ಮಾನಿಸಿದೆ. ಇದರಿಂದಾಗಿ ಅಲ್ಲಿ ಪಕ್ಷದ ಕೆಲವರಿಗೆ ಅಸಮಾಧಾನವಿರುವುದು ಸಹಜ. ಹೈಕಮಾಂಡ್ ಅಲ್ಲಿನ ಅಸಮಧಾನವನ್ನು ಶಮನ ಮಾಡುತ್ತದೆ ಎಂದರು.
ಅಜ್ಜಂಪೀರ್ ಖಾದ್ರಿ ಅವರು ಕಾಂಗ್ರೆಸ್ನ ಹಿರಿಯ ಮುಖಂಡರು. ಪಕ್ಷದಲ್ಲಿ ಅವರಿಗೆ ಮುಂದೆ ಭವಿಷ್ಯವಿದೆ. ಹೀಗಾಗಿ ಅವರೊಂದಿಗೆ ಪಕ್ಷದ ನಾಯಕರು ಮಾತನಾಡಿ ಎಲ್ಲವನ್ನೂ ಸರಿಮಾಡಲಿದ್ದಾರೆ. ಮೊದಲಿಂದಲೂ ಶಿಗ್ಗಾವಿ ಮತಕ್ಷೇತ್ರದಲ್ಲಿ ಪಕ್ಷದ ಟಿಕೆಟ್ ಹಂಚಿಕೆಯಲ್ಲಿ ಯಾವುದೇ ರೀತಿಯ ಕಗ್ಗಂಟು ಇರಲಿಲ್ಲ. ಇಬ್ಬರೇ ಆಕಾಂಕ್ಷಿಗಳಿದ್ದರು. ಕೊನೆಯ ಘಳಿಗೆಯಲ್ಲಿ ಯಾಸೀರ್ ಖಾನ್ ಅವರಿಗೆ ಟಿಕೆಟ್ ಸಿಕ್ಕಿದೆ. ಶಿಗ್ಗಾಂವಿ ಕ್ಷೇತ್ರದಲ್ಲಿ ಅವರ ಹೆಸರು ಚೆನ್ನಾಗಿದ್ದು, ಈ ಉಪಚುನಾವಣೆಯಲ್ಲಿ ಯಾಸೀರ್ ಖಾನ್ ಗೆಲ್ಲುತ್ತಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.