ಹುಬ್ಬಳ್ಳಿ: ಭಾರತೀಯ ಜನತಾ ಪಕ್ಷದ ನಾಯಕರು ಸರ್ಕಾರಿ ಅಧಿಕಾರಿಗಳ ಕರ್ತವ್ಯ ಪ್ರಶ್ನೆ ಮಾಡುವುದರ ಜೊತೆಗೆ ಅನಗತ್ಯವಾಗಿ ಸರ್ಕಾರದ ವಿರುದ್ಧ ಹೇಳಿಕೆ ಕೊಡುತ್ತಾ ಶಾಂತಿ ಸುವ್ಯವಸ್ಥಿತಗೆ ಧಕ್ಕೆ ತರುತಿದ್ದು ಅಂತವರ ಮೇಲೆ ಕಠಿಣ ಕಾನೂನು ಕ್ರಮ ಕೈಗೊಳ್ಳಲು ಒತ್ತಾಯಿಸಿ ಎಫ್ಐಆರ್ ದಾಖಲಿಸುವಂತೆ ಆಗ್ರಹಿಸಿ ಕಾಂಗ್ರೆಸ್ ಮುಖಂಡರು ನಗರದ ವಿವಿಧ ಠಾಣೆಗಳಲ್ಲಿ ಗುರುವಾರ ಕಾಂಗ್ರೆಸ್ ನಾಯಕರುಮನವಿ ಸಲ್ಲಿಸಿದರು.
ನಗರದಶಹರ ಪೊಲೀಸ್ ಠಾಣೆಯಲ್ಲಿ ಮನವಿ ಸಲ್ಲಿಸಿದ ಬಳಿಕ ಮಾತನಾಡಿದ ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಅಲ್ತಾಫ್ ಹಳ್ಳೂರ, ‘1992ರ ಗಲಭೆ ಪ್ರಕರಣ ಆರೋಪಿ ಶ್ರೀಕಾಂತ ಪೂಜಾರಿ ಬಂಧನ ಖಂಡಿಸಿ ಬಿಜೆಪಿ ಬುಧವಾರ ನಡೆಸಿದ ಪ್ರತಿಭಟನೆಯಿಂದ ಜನರಿಗೆ ತೊಂದರೆಯಾಗಿದೆ. ರೌಡಿಶೀಟರ್ ಶ್ರೀಕಾಂತ್ ಅವರನ್ನು ಕರ ಸೇವಕನೆಂದು ಹೇಳಿದ್ದಲ್ಲದೆ, ಪ್ರತಿಭಟನೆ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯಮ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಅಲ್ಪಸಂಖ್ಯಾತರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ’ ಎಂದು ಆರೋಪಿಸಿದರು.
‘ಅವಳಿ ನಗರದಲ್ಲಿ ಭಯದ ವಾತಾವರಣ ಸೃಷ್ಟಿಸಿ, ಪ್ರಚೋದನಕಾರಿ ಭಾಷಣದಿಂದ ಮಾನಹಾನಿ ಮಾಡಿದ್ದಕ್ಕೆ ವಿಧಾನಸಭೆ ವಿರೋಧಪಕ್ಷದ ನಾಯಕ ಆರ್. ಅಶೋಕ್, ಶಾಸಕರಾದ ಅರವಿಂದ ಬೆಲ್ಲದ, ಮಹೇಶ ಟೆಂಗಿನಕಾಯಿ, ಎಂ.ಆರ್. ಪಾಟೀಲ, ವಿಧಾನ ಪರಿಷತ್ ಸದಸ್ಯ ಪ್ರದೀಪ ಶೆಟ್ಟರ್, ಪಾಲಿಕೆಯ ಬಿಜೆಪಿ ಸದಸ್ಯರು ಹಾಗೂ ಮುಖಂಡರ ವಿರುದ್ಧ ದೂರು ಸಲ್ಲಿಸಲಾಗಿದೆ’ ಎಂದರು ಹೇಳಿದರು.
ಕಾಂಗ್ರೆಸ್ ಮುಖಂಡ ಸದಾನಂದ ಡಂಗನವರ ಮಾತನಾಡಿ, ‘ಸಾಂವಿಧಾನಿಕ ಹುದ್ದೆಯಲ್ಲಿರುವ ಆರ್. ಆಶೋಕ್ ಹಾಗೂ ಬಿಜೆಪಿ ಮುಖಂಡರು ಸಮಾಜಘಾತುಕ ವ್ಯಕ್ತಿ ಪರ ಪ್ರತಿಭಟನೆ ಮಾಡಿದ್ದಲ್ಲದೆ ಶಹರ ಠಾಣೆಗೆ ಮುತ್ತಿಗೆ ಯತ್ನಿಸಿದ್ದು ಅಹಿತಕರ ಘಟನೆ. ಈ ಮೂಲಕ ಕ್ಷುಲ್ಲಕ ರಾಜಕಾರಣ ಮಾಡುತ್ತಿದ್ದಾರೆ. ಬರದಿಂದ ಕಂಗೆಟ್ಟಿರುವ ರೈತರಿಗೆ ನೆರವು ನೀಡುವಂತೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ತರುವ ಬದಲು, ದೊಂಬಿ ಎಬ್ಬಿಸಲು ಯತ್ನಿಸಿದ್ದಾರೆ. ಪ್ರತಿಭಟನೆ ಮಾಡಿದ ಎಲ್ಲರನ್ನೂ ಬಂಧಿಸಿ, ಕಠಿಣ ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸಿದರು..
ದೀಪಾ ಗೌರಿ, ಸುವರ್ಣ ಕಲಕುಂಟ್ಲ, ನಾಗೇಶ ಕಲಬುರಗಿ, ಮುಂತಾದವರರು ಮಾತನಾಡಿ ಪ್ರಚೋದನಕಾರಿ ಹೇಳಿಕೆ ನೀಡಿದ ನೀಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಸಹ ಆಗ್ರಹಿಸಿದರು.