ಹುಬ್ಬಳ್ಳಿ: ಬಿಜೆಪಿ ರಾಜಭವನವನ್ನು ಯಾವುದೇ ರೀತಿಯಿಂದ ದುರ್ಬಳಕೆ ಮಾಡಿಕೊಂಡಿಲ್ಲ. ಆದರೆ ಕಾಂಗ್ರೆಸ್ ರಾಜಭವನವನ್ನು ದುರ್ಬಳಕೆ ಮಾಡಿಕೊಂಡ ಬಗ್ಗೆ ದೊಡ್ಡ ಇತಿಹಾಸವೇ ಇದೆ ಎಂದು ಶಾಸಕ ಮಹೇಶ ಟೆಂಗಿನಕಾಯಿ ಆರೋಪಿಸಿದರು.
ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೂರುಗಳು ಬಂದ ಹಿನ್ನೆಲೆಯಲ್ಲಿ ಪರಿಶೀಲಿಸಲು, ಮಾಹಿತಿ ಪಡೆಯಲು ರಾಜ್ಯಪಾಲರು ಮುಂದಾಗಿದ್ದಾರೆ ಇದರಲ್ಲಿತಪ್ಪೇನಿದೆ. ಅಂತಹ ಅಧಿಕಾರ ರಾಜ್ಯಪಾಲರಿಗಿದೆ ಎಂದರು.
ಮುಡಾ, ವಾಲ್ಮೀಕಿ ನಿಗಮದಲ್ಲಿ ಹಗರಣ ಆಗಿಲ್ಲವೆಂದರೆ ಸಿಎಂಗೆ ಭಯ ಯಾಕೆ. ಆರೋಪದ ಹಿನ್ನೆಲೆಯಲ್ಲಿ ನೈತಿಕ ಹೊಣೆ ಹೊತ್ತು ಈ ವೇಳೆಗೆ ಸಿಎಂ ರಾಜೀನಾಮೆ ನೀಡಬೇಕಾಗಿತ್ತು. ಅದು ಬಿಟ್ಟು ಭಂಡತನದಿಂದ ರಾಜ್ಯಪಾಲರ ವಿರುದ್ದವೇ ಆರೋಪಕ್ಕಿಳಿದಿದ್ದಾರೆ ಎಂದು ಹೇಳಿದರು.
ರಾಜಭವನದಿಂದ ಯಾವ ದಾಖಲೆ ಮಾಹಿತಿ ಸೋರಿಕೆ ಆಗಿರದು. ನಟ ದರ್ಶನ ವಿಚಾರದಲ್ಲಿ ಜೈಲಿನ ಹಲವು ಮಾಹಿತಿಗಳು ಹೇಗೆ ಹೊರಬಂದವು? ಸರ್ಕಾರ ಇದಕ್ಕೆ ಉತ್ತರ ನೀಡಬೇಕು ಎಂದು ಅವರು ಆಗ್ರಹಿಸಿದರು.