ಕೋಲಾರ:- ಕಾಂಗ್ರೆಸ್ ನ ಗ್ಯಾರಂಟಿ ಯೋಜನೆಗಳು ಠುಸ್ ಆಗಿದೆ ಎಂದು ಸಂಸದ ಮುನಿಸ್ವಾಮಿ ಹೇಳಿದ್ದಾರೆ.
ಈ ಸಂಬಂಧ ಮಾತನಾಡಿದ ಅವರು,2024ರ ಚುನಾವಣೆಯಲ್ಲಿ ಕೋಲಾರ ಕ್ಷೇತ್ರದಲ್ಲಿ ಬಿಜೆಪಿಯಿಂದ ಯಾರೇ ಸ್ಪರ್ಧಿಸಿದರೂ ಅವರಿಗೆ ಮತ ನೀಡುವಂತೆ ಹಾಗೂ ದೇಶದಲ್ಲಿ ಬಿಜೆಪಿ ಗೆಲ್ಲಿಸಿ, ಮತ್ತೊಮ್ಮೆ ಮೋದಿಯವರು ಮೂರನೇ ಬಾರಿಗೆ ಪ್ರಧಾನಮಂತ್ರಿಯಾಗಲು ಬಿಜೆಪಿ ಕಾರ್ಯಕರ್ತರು ಧೈರ್ಯದಿಂದ ಕಾರ್ಯನಿರ್ವಹಿಸಿ ಹಾಗೂ ಬೂತ್ ಮಟ್ಟದಲ್ಲಿ ಬಿಜೆಪಿ ಪಕ್ಷದ ಅಭ್ಯರ್ಥಿಗೆ ಹೆಚ್ಚು ಮತ ಬೀಳುವಂತೆ ಮತದಾರರಿಗೆ ಮನವೊಲಿಸುವಂತೆ ಕರೆ ನೀಡಿದರು.
ನರೇಂದ್ರ ಮೋದಿಯವರು ಪ್ರಧಾನಮಂತ್ರಿಯಾಗಿ ಜಾರಿಗೆ ತಂದಿರುವ ಅನೇಕ ಜನಪರ ಯೋಜನೆಗಳ ಬಗ್ಗೆ ಮತದಾರರ ಮನವರಿಕೆ ಮಾಡಿ ಅವರ ಮನವೊಲಿಸಿ ಎಂದರು. ಕಳೆದ ಮೇ ತಿಂಗಳಿನಲ್ಲಿ ನಡೆದ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಜನರು ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳಿಗೆ ಮರುಳಾಗಿದ್ದರಿಂದ ಬಿಜೆಪಿ ಸೋಲಲು ಕಾರಣವಾಯಿತು. ಆದರೆ ಈಗ ಅವರಿಗೆ ಮತ ಹಾಕಿದವರೇ ಪಶ್ಚಾತ್ತಾಪ ಪಟ್ಟು ಕಾಂಗ್ರೆಸ್ ಗೆ ಮತ ಹಾಕಿ ನಾವು ತಪ್ಪು ಮಾಡಿದ್ದೇವೆ ಎಂದು ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಮತ ಹಾಕಲು ಮುಂದಾಗುತ್ತಿದ್ದಾರೆ.
ಕಾಂಗ್ರೆಸ್ ಸರ್ಕಾರ ನೀಡಿದ್ದ ಭರವಸೆಗಳನ್ನು ಜಾರಿಗೆ ತರಲು ಸಾಧ್ಯವಾಗುತ್ತಿಲ್ಲ. ಗೃಹಲಕ್ಷ್ಮೀ ಯೋಜನೆ ಕೆಲವರಿಗೆ ಮಾತ್ರ ತಲುಪಿದೆ, ಅನ್ನಭಾಗ್ಯ ಯೋಜನೆಯ ಹಣ ಬಹಳಷ್ಟು ಜನರಿಗೆ ಬರಲೇ ಇಲ್ಲ. ಶಕ್ತಿ ಯೋಜನೆಯಿಂದ ಗ್ರಾಮೀಣ ಭಾಗದಲ್ಲಿ ಬಸ್ಗಳು ಬರುತ್ತಿಲ್ಲ. ಈ ಕಾರಣದಿಂದ ವಿದ್ಯಾರ್ಥಿಗಳಿಗೆ ಕಾಲ್ನಡಿಗೆಯೇ ಶಾಶ್ವತವಾಗಿದ್ದು, ಸರಿಯಾದ ಸಮಯಕ್ಕೆ ಶಾಲೆಗಳಿಗೆ ಹೋಗಲು ಆಗುತ್ತಿಲ್ಲ. ಆದ್ದರಿಂದ ಈಗ ತಾವು ಕಾಂಗ್ರೆಸ್ ಲೋಪಗಳನ್ನು ಮನವರಿಕೆ ಮಾಡಿ ಬಿಜೆಪಿ ಸಾಧನೆಗಳನ್ನು ಜನರಿಗೆ ತಿಳಿಸಿ, ಬಿಜೆಪಿಗೆ ಮತ ಹಾಕುವಂತೆ ಕಾರ್ಯಕರ್ತರನ್ನು ಹುರಿದುಂಬಿಸಿ ಎಂದು ಕಾರ್ಯಕರ್ತರಿಗೆ ಕರೆಯಿತ್ತರು.