ಸಂಡೂರು: ಕಾಂಗ್ರೆಸ್ ಸರ್ಕಾರ ಹಿಂದೂಯೇತರ ಆರೋಪಿಗಳನ್ನೇ ರಕ್ಷಿಸಲು ಕ್ರಮ ಕೈಗೊಳ್ಳುತ್ತಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುತ್ತಲೇ ಹಳೇ ಹುಬ್ಬಳ್ಳಿ ಗಳಭೆಕೋರರ ಮೇಲಿನ ಕೇಸ್ ರದ್ದುಪಡಿಸಿತು. ಇದೀಗ ಡಿಜೆ ಹಳ್ಳಿ, ಕೆಜಿ ಹಳ್ಳಿ ಗಲಭೆ ಪ್ರಕರಣದಲ್ಲೂ ಮುಸ್ಲಿಮರ ಮೇಲಿನ ಕೇಸ್ ಹಿಂಪಡೆಯಲು ತಯಾರಿ ನಡೆಸಿದೆ ಎಂದು ಆರೋಪಿಸಿದ್ದಾರೆ.
ರಾಜ್ಯ ಸರ್ಕಾರ ಡಿಜೆ ಹಳ್ಳಿ, ಕೆಜಿ ಹಳ್ಳಿ ಪ್ರಕರಣ ಹಿಂಪಡೆಯಲು ಎಲ್ಲಾ ತಯಾರಿ ನಡೆಸಿರುವ ಬಗ್ಗೆ ತಮಗೆ ಪಕ್ಕಾ ಮಾಹಿತಿ ಬಂದಿದೆ. ತನ್ನದೇ ಪಕ್ಷದ ಒಬ್ಬ ದಲಿತ ಶಾಸಕನ ಮನೆ ಸುಟ್ಟು ಹಾಕಿದ್ದಾರೂ ಕಾಂಗ್ರೆಸ್ಗೆ ತುಷ್ಟೀಕರಣ ರಾಜಕಾರಣವೇ ಪ್ರಮುಖವಾಗಿದೆ. ಹಿಂದೂ ಸಂಘಟನೆ, ಹಿಂದೂಗಳು ಮತ್ತು ದೇವಸ್ಥಾನಗಳ ಮೇಲೆ ದಾಳಿ ನಡೆದರೂ ಕಾಂಗ್ರೆಸ್ ಸರ್ಕಾರ ಹಿಂದೂಯೇತರ ಆರೋಪಿಗಳನ್ನೇ ರಕ್ಷಿಸಲು ಕ್ರಮ ಕೈಗೊಳ್ಳುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.