ಪಾಂಡವಪುರ:- ಸ್ವಾರ್ಥಕ್ಕಾಗಿ ಕಾಂಗ್ರೆಸ್ ಸರ್ಕಾರ ರೈತರನ್ನು ಬಲಿ ಕೊಡುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ಆಕ್ರೋಶ ವ್ಯಕ್ತಪಡಿಸಿದರು.
ಈ ಸಂಬಂಧ ಮಾತನಾಡಿದ ಅವರು,ತಮಿಳುನಾಡಿನಲ್ಲಿ 60 ಟಿಎಂಸಿ ನೀರಿದ್ದರೂ ಸಹ ರಾಜ್ಯದ ಕಾಂಗ್ರೆಸ್ ಸರಕಾರ ತಮಿಳುನಾಡಿನಲ್ಲಿರುವ ಕಾಂಗ್ರೆಸ್ ಒಕ್ಕೂಟದ ದೋಸ್ತಿ ಸರಕಾರಕ್ಕಾಗಿ ಕಾವೇರಿ ನೀರು ಹರಿಬಿಟ್ಟಿತು. ವಿದ್ಯುತ್ ಸಮಸ್ಯೆಯಂತ ಹೇಳತೀರದಾಗಿದೆ. ವಿದ್ಯುತ್ ಸಮಸ್ಯೆಯಿಂದ ರೈತ ಸಂಕುಲ, ಕೈಗಾರಿಕೆ, ಉದ್ಯಮಗಳು ನಲುಗಿ ಹೋಗಿವೆ ಎಂದು ಹರಿಹಾಯ್ದರು.
ಕಾಂಗ್ರೆಸ್ ಕೇಂದ್ರದ ಎನ್ಡಿಆರ್ಎಫ್ ಅನುದಾನ ನೀಡಿಲ್ಲ ಎಂದು ಆರೋಪಿಸುತ್ತಿದೆ. ಶೀಘ್ರವೇ ಎನ್ಡಿಆರ್ಎಫ್ ಅನುದಾನ ಬಿಡುಗಡೆ ಮಾಡಿಸಲಾಗುವುದು. ರಾಜ್ಯ ಸರಕಾರ ಬರಕ್ಕಾಗಿ ರಾಜ್ಯದ 31 ಜಿಲ್ಲೆಗೆ 302 ಕೋಟಿ ಮೀಸಲಿಟ್ಟಿದೆ. ಎನ್ಡಿಆರ್ಎಫ್ ಅನುದಾನ ಬರುವ ತನಕ ಬೇರೆಡೆಯಿಂದ ಬರಕ್ಕಾಗಿ 1 ಸಾವಿರ ಕೋಟಿ ಹಣವನ್ನು ಎತ್ತಿಟ್ಟು ಸಮಸ್ಯೆ ಬಗೆಹರಿಸಿಕೊಳ್ಳಬೇಕು, ಎನ್ಡಿಆರ್ಎಫ್ ಅನುದಾನ ಬಂದ ಬಳಿಕ ಅನುದಾನ ಬಳಕೆ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
ರಾಜ್ಯದಲ್ಲಿ ಎದುರಾಗಿರುವ ಬರದ ಸ್ಥಿತಿಗತಿಯ ಬಗ್ಗೆ ಅಧ್ಯಯನ ಮಾಡುವ ಆಲೋಚನೆ ಇಲ್ಲದೆ ಅಧಿಕಾರಕ್ಕಾಗಿ ಕಿತ್ತಾಡುತ್ತಿದ್ದಾರೆ. ಬಿಜೆಪಿ ಪಕ್ಷ ಬರ ಸ್ಥಿತಿಗತಿ ಅಧ್ಯಯನ ಮಾಡಿ ರಾಜ್ಯ, ಕೇಂದ್ರ ಸರಕಾರಕ್ಕೆ ಗ್ರೌಂಡ್ ರಿಪೋರ್ಟ್ ಸಲ್ಲಿಸಲು ರಾಜ್ಯದ 31 ಜಿಲ್ಲೆಯಲ್ಲಿ 16 ತಂಡ ಕೆಲಸ ಮಾಡುತ್ತಿದೆ ಎಂದರು.
ಪ್ರಚಾರಕ್ಕಾಗಿ ಅಧ್ಯಯನ ನಡೆಸುತ್ತಿಲ್ಲ. ಅಧ್ಯಯನದ ವೇಳೆ ಸಂಗ್ರಹಿಸಲಾದ ಎಲ್ಲಾ ವರದಿಯನ್ನು ನಮ್ಮ ಕೇಂದ್ರ ಸರಕಾರಕ್ಕೂ ಸಹ ಸೂಕ್ತ ಪರಿಹಾರ ದೊರಕಿಸಿಕೊಡುವ ಕೆಲಸ ಮಾಡುತ್ತೇವೆ ಎಂದು ಭರವಸೆ ನೀಡಿದರು.