ಬೆಂಗಳೂರು:- ಮಹಿಳಾ ಉದ್ಯಮಿಗಳಿಗೆ ಸಹಾಯ ಸೌಕರ್ಯ ಒದಗಿಸಲು ಸರಕಾರ ಬದ್ಧವಾಹಿದೆ ಎಂದು ಸಚಿವ ಎಂ ಬಿ ಪಾಟೀಲ್ ಹೇಳಿದ್ದಾರೆ.
ಈ ಸಂಬಂಧ ಮಾತನಾಡಿದ ಅವರು,ರಾಜ್ಯ ಸರಕಾರವು ಮಹಿಳಾ ಉದ್ಯಮಿಗಳಿಗೆ ಕರ್ನಾಟಕ ಪ್ರದೇಶ ಕೈಗಾರಿಕಾ ಅಭಿವೃದ್ಧಿ ಮಂಡಳಿ ಮತ್ತು ಮೂಲಸೌಕರ್ಯ ಅಭಿವೃದ್ಧಿ ಮಂಡಳಿ ಸೇರಿದಂತೆ ಹಲವು ಸಾಂಸ್ಥಿಕ ವ್ಯವಸ್ಥೆಗಳಿಂದ ಉತ್ತೇಜನ ನೀಡುತ್ತಿದೆ. ಉದ್ಯಮಶೀಲ ಮಹಿಳೆಯರು ಬೆಂಗಳೂರಿನ ಆಚೆಯೂ ಉದ್ದಿಮೆಗಳನ್ನು ಸ್ಥಾಪಿಸಲು ಮನಸ್ಸು ಮಾಡಬೇಕು ಎಂದರು.

ರಾಜ್ಯದ ಕೈಗಾರಿಕಾ ನೀತಿಯಲ್ಲಿ ಕೆಐಎಡಿಬಿಯಿಂದ ಹಂಚುತ್ತಿರುವ ನಿವೇಶನದಲ್ಲಿ ಮಹಿಳಾ ಉದ್ಯಮಿಗಳಿಗೆ ಶೇ 5ರಷ್ಟು ಮೀಸಲು ನೀಡಲಾಗಿದೆ. ಜೊತೆಗೆ ಕೆಎಸ್ಸೆಸೈಡಿಸಿಯಲ್ಲೂ ಜಮೀನು ಹಂಚಿಕೆಯಲ್ಲಿ ಇದೇ ಸೂತ್ರ ಅಳವಡಿಸಿಕೊಳ್ಳಲಾಗಿದೆ. ಹೂಡಿಕೆ ಸಬ್ಸಿಡಿಯಾಗಿ ಶೇ.5ರಷ್ಟು ಹೆಚ್ಚುವರಿ ಪ್ರೋತ್ಸಾಹ ಮತ್ತು ವಿದ್ಯುತ್ ಬಿಲ್ ಮೇಲೆ ಗರಿಷ್ಠ ನಾಲ್ಕು ವರ್ಷಗಳ ವಿನಾಯಿತಿ ನೀಡಲಾಗುತ್ತಿದೆ ಎಂದು ಸಚಿವರು ಇದೇ ವೇಳೆ ವಿವರಣೆ ನೀಡಿದರು.
ರಾಜ್ಯವು ಮಹಿಳೆಯರನ್ನು ಕೈಗಾರಿಕಾ ರಂಗದಲ್ಲಿ ಮೊದಲಿನಿಂದಲೂ ಪ್ರೋತ್ಸಾಹಿಸುತ್ತಿದೆ. ತಂತ್ರಜ್ಞಾನ ಪರಿಪೋಷಣಾ ಕೇಂದ್ರ, ತಂತ್ರಜ್ಞಾನ ಅಳವಡಿಕೆ ಇವುಗಳಲ್ಲೂ ಅರ್ಧದಷ್ಟು ಮೊತ್ತವನ್ನು ಸಬ್ಸಿಡಿಯಾಗಿ ನೀಡಲಾಗುತ್ತಿದೆ. ಇದಕ್ಕೆ ಪೂರಕವಾಗಿ ಮಳೆ ನೀರು ಸಂಗ್ರಹಣೆ, ತ್ಯಾಜ್ಯ, ನೀರು ಮರು ಬಳಕೆ, ತ್ಯಾಜ್ಯ ಸಂಸ್ಕರಣಾ ಘಟಕ ಸ್ಥಾಪನೆಗಳಿಗೆ ಪ್ರೋತ್ಸಾಹ ಕೊಡಲಾಗುತ್ತಿದೆ ಎಂದು ವಿವರಿಸಿದರು.

