ಕೆಆರ್ ಪುರ:– ಕಳೆದ ಏಳು ದಶಕಗಳಲ್ಲಿ ಆಗದಷ್ಟು ಅಭಿವೃದ್ಧಿ ಕೆಲಸಗಳು ಪ್ರಧಾನಿ ನರೇಂದ್ರ ಮೋದಿ ಅವರ ಆಡಳಿತ ಅವಧಿಯ ಹತ್ತು ವರ್ಷಗಳಲ್ಲಿ ಆಗಿದೆ ಎಂದು
ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ತಿಳಿಸಿದರು.
ಕ್ಷೇತ್ರದ ಕೆ.ಆರ್.ಪುರ ಬಿಬಿಎಂಪಿ ಕಛೇರಿ ಬಳಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಗ್ಯಾರೆಂಟಿ ಹಾಗೂ ಯೋಜನೆಗಳ ಬಗ್ಗೆ ಜನರಿಗೆ ತಿಳಿಸಿಕೊಡುವ ನಮ್ಮ ಸಂಕಲ್ಪ ವಿಕಸಿತ ಭಾರತ ಯಾತ್ರೆಯ ಡಿಜಿಟಲ್ ವಾಹನಕ್ಕೆ ಚಾಲನೆ ನೀಡಿ ಮಾತನಾಡಿದರು, ಜಗತ್ತಿನಲ್ಲಿ ಭಾರತದ ಶ್ರೇಷ್ಟತೆಯನ್ನು ಎತ್ತಿಹಿಡಿದಿದ್ದು ನಮ್ಮ ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿಯವರು, ಕಟ್ಟಕಡೆಯ ವ್ಯಕ್ತಿಯವರೆಗೂ ಅಭಿವೃದ್ದಿ ಕಾರ್ಯಗಳನ್ನು ತಲುಪಿಸಲು ಅವಿರತವಾಗಿ ಪ್ರಯತ್ನಿಸುತ್ತಿದ್ದಾರೆ ಅದರಲ್ಲಿ ಯಶಸ್ವಿಯೂ ಆಗಿದ್ದಾರೆ.ಪ್ರತಿದಿನ ಸತತ ಹದಿನೆಂಟು ಗಂಟೆಗಳ ಕಾಲ ಕೆಲಸ ಮಾಡುವ ಜಗತ್ತಿನ ಏಕೈಕ ವ್ಯಕ್ತಿಯಾಗಿ ಪ್ರಧಾನಿ ನರೇಂದ್ರಮೋದಿಯವರು ನಿಲ್ಲುತ್ತಾರೆ ಎಂದರು.
ನಮ್ಮ ಸಂಕಲ್ಪ ವಿಕಸಿತ ಭಾರತದ ಯಾತ್ರೆಯು ಪ್ರತಿ ಪಂಚಾಯಿತಿಯ ಪ್ರತಿ ಹಳ್ಳಿಗಳು, ಪ್ರತಿ ವಾರ್ಡ್ ನ ಎಲ್ಲಾ ಗ್ರಾಮಗಳಲ್ಲಿ ಸಂಚರಿಸುತ್ತದೆ. ಸರ್ಕಾರದ ಪ್ರತಿಯೊಂದು ಯೋಜನೆಗಳ ಬಗ್ಗೆಯೂ ಜನರಿಗೆ ಮನದಟ್ಟು ಮಾಡುವ ಕೆಲಸವನ್ನು ಕಾರ್ಯಕರ್ತರು ಮಾಡಬೇಕಿದೆ, ಯುವಕರು, ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಬಿಜೆಪಿ ಪಕ್ಷಕ್ಕೆ ಪ್ರಭಾವಿತರಾಗುತ್ತಿರುವುದು ಒಳ್ಳೆಯ ಬೆಳವಣಿಗೆಯಾಗಿದ್ದು, ಪಕ್ಷಕ್ಕೆ ಸಹಕಾರಿಯಾಗಲಿದೆ ಎಂದು ತಿಳಿಸಿದರು.
ಶಾಸಕ ಬಿ.ಎ ಬಸವರಾಜ ಮಾತನಾಡಿ, ಹತ್ತು ವರ್ಷಗಳ ಕಾಲ ದೇಶವನ್ನು ಯಶಸ್ವಿಯಾಗಿ ಮುನ್ನಡೆಸಿರುವ ನರೇಂದ್ರ ಮೋದಿಯವರ ಕೈ ಬಲಪಡಿಸಬೇಕು, ಮತ್ತೊಂದು ಬಾರಿ ಅವರನ್ನು ಆಯ್ಕೆ ಮಾಡುವ ಮೂಲಕ ಜಗತ್ತಿನ ಭೂಪಟದಲ್ಲಿ ಭಾರತ ಬೆಳಗುವಂತೆ ಮಾಡಬೇಕಿದೆ ಎಂದರು.
ದೇಶದ ಬಡವರ ಸಂಕಷ್ಟ, ರೈತರ ಸಮಸ್ಯೆಗಳನ್ನು ಅರಿತು ಪಿಎಂ ಕೃಷಿ ಸಮ್ಮಾನ್, ಫಸಲ್ ಬಿಮಾ, ರಸಾಯನಿಕ ಗೊಬ್ಬರದ ಸಬ್ಸಿಡಿ, ಪ್ರತಿ ಮನೆಗೂ ಶೌಚಾಲಯ, ಪಿಎಂ ಆವಾಜ್ ಯೋಜನೆ, ಉಜ್ವಲ ಯೋಜನೆಯಡಿ ಉಚಿತ ಅಡಿಗೆ ಅನಿಲ ಸಂಪರ್ಕ ನೀಡಲಾಗಿದೆ. ಕೇಂದ್ರ ಸರ್ಕಾರದ ಜನೋಪಯೋಗಿ ಯೋಜನೆಗಳನ್ನು ಗ್ರಾಮೀಣ ಹಾಗೂ ನಗರ ಪ್ರದೇಶದವರಿಗೆ ತಲುಪಿಸುವ ಉದ್ದೇಶದಿಂದ ವಿಕಸಿತ್ ಭಾರತ ಸಂಕಲ್ಪ ಯಾತ್ರೆ ದೇಶಾದ್ಯಂತ ಮೋದಿ ಗ್ಯಾರಂಟಿ ಲಾಭವನ್ನು ಜನರು ಪಡೆಯಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ರಾಜ್ಯ ಮಹಿಳಾ ಮೋರ್ಚಾ ಅಧ್ಯಕ್ಷೆ ಗೀತಾ ವಿವೇಕಾನಂದ, ಮಾಜಿ ಪಾಲಿಕೆ ಸದಸ್ಯರಾದ ಅಂತೋಣಿಸ್ವಾಮಿ, ಸಿದ್ದಲಿಂಗಯ್ಯ ,ಮಂಜುಳಾದೇವಿ,ಮುಖಂಡರಾದ ಇಟಾಚಿ ಮಂಜು, ರಮೇಶ್ ಗೌಡ ಮತ್ತಿತರರು ಇದ್ದರು.