ಬೆಂಗಳೂರು: ಪ್ರಸ್ತುತ ಕಾಲದಲ್ಲಿ ಸ್ಪರ್ಧೆ ಕೇವಲ ಶಾಲಾಮಟ್ಟದಲ್ಲಿ ಇಲ್ಲ, ಜಾಗತಿಕಮಟ್ಟದಲ್ಲಿದೆ. ಮಕ್ಕಳು ಜಾಗತಿಕವಾಗಿ ಯೋಚನೆ ಮಾಡಬೇಕು ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಕಿವಿಮಾತು ಹೇಳಿದರು.
ನಗರದ ಗಾಂಧಿ ಭವನದಲ್ಲಿ ಜವಾಹರ್ ಬಾಲ್ ಮಂಚ್ ಮಂಗಳವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, “ಈ ದೇಶ, ಪ್ರಪಂಚ ವಿಶಾಲವಾಗಿದೆ, ಜ್ಞಾನವೂ ಹೆಚ್ಚು ವಿಸ್ತಾರಗೊಳ್ಳುತ್ತಿದೆ, ಅದಕ್ಕೆ ತಕ್ಕಂತೆ ಮಕ್ಕಳು ಸಹ ಜ್ಞಾನದಾಹಿಗಳಾಗಬೇಕು, ಈಗಿನ ಶಿಕ್ಷಕರು ಮಕ್ಕಳಿಗಿಂತ ಹೆಚ್ಚು ಕಲಿಯಬೇಕಾಗಿದೆ ಎಂದರು.
ಇಡೀ ಪ್ರಪಂಚದಲ್ಲಿ ಅದೃಷ್ಟವಂತರು ಎಂದರೆ ಮಕ್ಕಳು. ಏಕೆಂದರೆ ಅವರ ಪೋಷಕರು ನಾವು ಕಷ್ಟಪಟ್ಟಂತೆ ಮಕ್ಕಳು ಪಡಬಾರದು ಎಂದು ಎಲ್ಲಾ ರೀತಿಯ ಸೌಕರ್ಯ ಮಾಡಿಕೊಡುತ್ತಾರೆ, ಅವರ ಕಷ್ಟಗಳಿಗೆ ನಾವು ಸಾಧನೆ ಮಾಡಿ ಗೌರವ ಸಲ್ಲಿಸಬೇಕು ಎಂದು ತಿಳಿಸಿದರು.
ನಾನು ಭರತನಾಟ್ಯ ಕಲಿಯಲು ಹೋಗಿದ್ದೆ
ನಾನು ವಿದ್ಯಾರ್ಥಿಯಾಗಿದ್ದಾಗ ಎಲ್ಲಾ ಕೆಲಸಗಳು, ಸ್ಪರ್ಧೆಗಳಲ್ಲೂ ಆಸಕ್ತಿಯಿಂದ ಭಾಗವಹಿಸುತ್ತಿದ್ದೆ. ಶಾಲೆಯ ಬ್ಯಾಂಡ್ ತಂಡದಲ್ಲಿ ಬೇಸ್ ಡ್ರಮ್ ನುಡಿಸುತ್ತಿದೆ. ನಾನು ಮತ್ತು ನನ್ನ ಗೆಳೆಯನೊಬ್ಬ ಚಾಮರಾಜಪೇಟೆಯ ನೃತ್ಯಕಲಾ ನಿಕೇತನ ಎನ್ನುವ ಶಾಲೆಗೆ ಭರತನಾಟ್ಯ ಕಲಿಯಲು ಸೇರಿದ್ದೆವು. ಸಮಯದ ಅಭಾವದ ಕಾರಣ ಕೇವಲ 6- 7 ತಿಂಗಳು ಮಾತ್ರ ಕಲಿಯಲು ಸಾಧ್ಯವಾಯಿತು ಎಂದು ಹಳೆಯ ನೆನಪುಗಳನ್ನು ಮೆಲುಕು ಹಾಕಿದರು.
6 ನೇ ತರಗತಿಯಲ್ಲಿ ಇದ್ದಾಗ ಮೊದಲ ಚರ್ಚಾ ಸ್ಪರ್ಧೆಯಲ್ಲಿ ಭಾಗವಹಿಸಿದ್ದೆ. ರೈತ ಮೊದಲ- ಸೈನಿಕ ಮೊದಲ ಎನ್ನುವುದು ವಿಷಯವಾಗಿತ್ತು. ಇದರಲ್ಲಿ ಮೊದಲ ಬಹುಮಾನ ಪಡೆದೆ. ಹೀಗೆ ಮಕ್ಕಳು ಅವಕಾಶಗಳನ್ನು ಬಳಸಿಕೊಂಡು ಎತ್ತರಕ್ಕೆ ಬೆಳೆಯಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಏನಾನುಮಂ ಮಾಡು ಕೈಗೆ ದೊರೆತುಜ್ಜುಗವ ।
ನಾನೇನು ಹುಲುಕಡ್ಡಿಯೆಂಬ ನುಡಿ ಬೇಡ ।।
ಹೀನಮಾವುದುಮಿಲ್ಲ ಜಗದ ಗುಡಿಯೂಳಿಗದಿ ।
ತಾಣ ನಿನಗಿಹುದಿಲ್ಲಿ ಮಂಕುತಿಮ್ಮ ಎಂದು ಡಿವಿಜಿ ಅವರು ತಮ್ಮ ಕಗ್ಗದಲ್ಲಿ ಹೇಳುತ್ತಾರೆ.
ಅಂದರೆ ಸಮಾಜದಲ್ಲಿ ನಿಕೃಷ್ಟವಾದುದು ಏನೂ ಇಲ್ಲ, ಸಣ್ಣ ಹುಲ್ಲಿಗೂ ಅದರದ್ದೇ ಆದ ಮಹತ್ವವಿರುತ್ತದೆ. ಗಣೇಶನನ್ನು ಕೂರಿಸುವ ಮೊದಲು ಸಗಣಿ ಉಂಡೆಯ ಮಾಡಿ, ಅದಕ್ಕೆ ಗರಿಕೆ ಹುಲ್ಲು ಸಿಕ್ಕಿಸಿ ಪಿಳ್ಳಾರತಿ ಎಂದು ಪೂಜೆ ಮಾಡುತ್ತೇವೆ. ಗಣೇಶನ ಕೆಳಗೆ ಇಲಿ ಇರುತ್ತದೆ, ಅದಕ್ಕೂ ಗೌರವ ನೀಡುತ್ತೇವೆ, ಯಾವೂದನ್ನೂ ನಾವು ನಿರ್ಲಕ್ಷ್ಯ ಮಾಡುವಂತಿಲ್ಲ. ಸಣ್ಣ ಇರುವೆಗಳಿಗೂ ಊಟ ಹಾಕುತ್ತೇವೆ. ಇಲ್ಲಿ ಸಗಣಿ, ಇರುವೆ, ಇಲಿ ಹೀಗೆ ಯಾವುದಕ್ಕೂ ಜಾತಿಯಿಲ್ಲ ಇದು ನಮ್ಮ ಸಂಸ್ಕೃತಿ ಎಂದು ಹೇಳಿದರು.
ಸಾಧನೆಗೆ ಬಡವ- ಶ್ರೀಮಂತ ಎನ್ನುವ ಬೇಧವಿಲ್ಲ. ಸಲ್ಲದ ವಿಷಯಗಳಿಗೆ ಮಕ್ಕಳು ತಲೆ ಕೆಡಿಸಿಕೊಳ್ಳಬಾರದು, ಎಂಥಹ ಬಡವನ ಮಗನೂ ಸಾಧನೆಯ ಶಿಖರ ಏರಬಹುದು ಎಂದರು.
ಮಕ್ಕಳು ನಾಲ್ಕು ʼಡಿʼ ಗಳನ್ನು ಗಮನದಲ್ಲಿ ಇಟ್ಟುಕೊಳ್ಳಬೇಕು. “Dream, you should desired for the Dream, you dedicated for the dream, you should Discipline for the Dream” ಒಂದೇ ನೆಗೆತಕ್ಕೆ ಆಕಾಶ ಮುಟ್ಟುತ್ತೇನೆ ಎಂದು ಹಾರಬಾರದು ಅದರ ಬಗ್ಗೆ ಕನಸು ಕಟ್ಟಿಕೊಂಡು, ಶ್ರಮಪಟ್ಟು, ಶಿಸ್ತಿನಿಂದ ಬೆಳೆಯಬೇಕು ಎಂದು ಸ್ಪೂರ್ತಿಯ ಮಾತುಗಳನ್ನಾಡಿದರು.
ಬೇರುಗಳನ್ನು ಮರೆತರೇ ದಾರಿಯನ್ನು ಮರೆತಂತೆ, ಸ್ಪರ್ಧೆಯ ಮುಖಾಂತರ ನಿಮ್ಮ ಪ್ರತಿಭೆಗಳನ್ನು ಗುರುತಿಸುವ ಕೆಲಸವನ್ನು ಜವಾಹಾರ್ ಬಾಲ್ ಮಂಚ್ ನಡೆಸುತ್ತಿದೆ. ನಮ್ಮ ಕಾಲದಲ್ಲಿ ಒಬ್ಬ ಮಂತ್ರಿಯ ಬಳಿ ಪ್ರಶಸ್ತಿ ತೆಗೆದುಕೊಳ್ಳುವ ಅದೃಷ್ಟ ನಮಗಿರಲಿಲ್ಲ. ಇಂದು ನೀವು ಉಪಮುಖ್ಯಮಂತ್ರಿಯ ಬಳಿ ಪ್ರಶಸ್ತಿ ಪಡೆದುಕೊಂಡಿರುವುದು ಸಾಧನೆ, ಹೀಗಂದ ಮಾತ್ರಕ್ಕೆ ಡಿ.ಕೆ.ಶಿವಕುಮಾರ್ ದೊಡ್ಡ ವ್ಯಕ್ತಿಯಲ್ಲ, ಬದಲಾಗಿ ಜನರು ನೀಡಿದ ಹುದ್ದೆ ದೊಡ್ಡದು ಎಂದು ಹೇಳಿದರು.
ಈ ದೇಶಕ್ಕೆ ಮಹಾತ್ಮ ಗಾಂಧಿ, ಬಾಬಾ ಸಾಹೇಬ್ ಅಂಬೇಡ್ಕರ್, ನೆಹರು ಅವರಂತಹ ಲಕ್ಷಾಂತರ ಚೇತನಗಳ ತ್ಯಾಗದಿಂದ ಸ್ವಾತಂತ್ರ್ಯ ದೊರಕಿದೆ. ಪ್ರಜಾಪ್ರಭುತ್ವವನ್ನು ಅನುಭವಿಸುತ್ತಿದ್ದೇವೆ, ಅದನ್ನು ಕಾಪಾಡುವ ಕೆಲಸ ಮಾಡಬೇಕು, ಈ ದೇಶದ ಭದ್ರ ಬುನಾದಿ ಸಂವಿಧಾನದ ಬಗ್ಗೆ ಮಕ್ಕಳು ಹೆಚ್ಚು ತಿಳಿದುಕೊಳ್ಳಬೇಕು ಎಂದು ಕಾಂಗ್ರೆಸ್ ಸರ್ಕಾರ ಕೆಲಸ ಮಾಡುತ್ತಿದೆ ಎಂದರು.
ಯಾವುದೇ ಸರ್ಕಾರ ಬಂದರೂ ಶೇ 30- 35 ರಷ್ಟು ಹಣವನ್ನು ಮಕ್ಕಳ ಶಿಕ್ಷಣ, ಆರೋಗ್ಯ ಸೇರಿದಂತೆ ಇತರೇ ಕಾರ್ಯಗಳಿಗೆ ವಿನಿಯೋಗ ಮಾಡುತ್ತದೆ. ನಮ್ಮ ಸರ್ಕಾರ ಕೂಡ ಮಕ್ಕಳಲ್ಲಿ ನಾಯಕತ್ವ ಗುಣ ಬೆಳೆಸಲು ಯೋಜನೆಗಳನ್ನು ರೂಪಿಸುತ್ತಿದೆ ಎಂದು ತಿಳಿಸಿದರು.