ಹುಬ್ಬಳ್ಳಿ,: ಅಮೆಜಾನ್ ಇಂಡಿಯಾ ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (ಎಚ್ಪಿಸಿಎಲ್) ಭಾರತದಲ್ಲಿ ದೀರ್ಘಾವಧಿಯ ಸಾರಿಗೆಗಾಗಿ ಕಡಿಮೆ ಇಂಗಾಲ ಇಂಧನಗಳ(ಎಲ್ಸಿಎಫ್)ಅಭಿವೃದ್ಧಿ ಮತ್ತು ಅಳವಡಿಕೆಗೆ ಕೈಜೋಡಿಸಿವೆ ಎಂದು ಕಂಪನಿಯು ತಿಳಿಸಿದೆ.
ಈ ಕುರಿತು ಮಾಹಿತಿ ನೀಡಿದ ಅವರು ಈ ಸಹಭಾಗಿತ್ವವು ಸಾರಿಗೆ ವಲಯದಲ್ಲಿ ಇಂಗಾಲದ ಹೊರಸೂಸುವಿಕೆ ಕಡಿಮೆ ಮಾಡಲು ಮಹತ್ವದ ಹೆಜ್ಜೆಯನ್ನು ಗುರುತಿಸುತ್ತದೆ. 2040ರ ವೇಳೆಗೆ ತನ್ನ ಕಾರ್ಯಾಚರಣೆಗಳಾದ್ಯಂತ ನಿವ್ವಳ-ಶೂನ್ಯ ಇಂಗಾಲ ಗುರಿ ಸಾಧಿಸುವ ಅಮೆಜಾನ್ನ ಜಾಗತಿಕ ಬದ್ಧತೆಗೆ ಇದು ಹೊಂದಿಕೆಯಾಗುತ್ತದೆ, 2070ರ ವೇಳೆಗೆ ಭಾರತದ ರಾಷ್ಟ್ರೀಯ ನಿವ್ವಳ-ಶೂನ್ಯ ಇಂಗಾಲದ ಗುರಿ ಸಾಧನೆಗೆ ಕೊಡುಗೆ ನೀಡುತ್ತದೆ.
ಈ ಕುರಿತು ಮಾತನಾಡಿದ ಅಮೆಜಾನ್ ಇಂಡಿಯಾದ ಕಾರ್ಯಾಚರಣೆ ವಿಭಾಗದ ಉಪಾಧ್ಯಕ್ಷ ಅಭಿನವ್ ಸಿಂಗ್ “ಜೈವಿಕ ಇಂಧನಗಳು ಭಾರತದ ಇಂಧನ ಪರಿವರ್ತನೆಗೆ ಪ್ರಮುಖವಾಗಿವೆ, ಅವು ಉದ್ಯೋಗಸೃಷ್ಟಿ ಮತ್ತು ಆರ್ಥಿಕ ಬೆಳವಣಿಗೆಗೆ ಕೊಡುಗೆ ನೀಡಲು ಸಿದ್ಧವಾಗಿವೆ. ಎಚ್ಪಿಸಿಎಲ್ನೊಂದಿಗೆ ಅಮೆಜಾನ್ನ ಈ ಸಹಭಾಗಿತ್ವವು ಇಂಧನ ಪರಿವರ್ತನೆಯ ಬದಲಾವಣೆಯನ್ನು ಸಶಕ್ತಗೊಳಿಸುವತ್ತ ಒಂದು ದಿಟ್ಟ ಹೆಜ್ಜೆಯಾಗಿದೆ,
ಇದರಿಂದ ನಮಗೆ ಸಂತಸ ತಂದಿದೆ. ಈ ಪ್ರಯಾಣದ ಭಾಗವಾಗಿ 2040ರ ವೇಳೆಗೆ ನಿವ್ವಳ-ಶೂನ್ಯಇಂಗಾಲದ ಜಾಗತಿಕ ಗುರಿಗೆ ಅನುಗುಣವಾಗಿ, ನಮ್ಮ ಸಾರಿಗೆ ವಲಯದಲ್ಲಿ ಇಂಧನ ಪರ್ಯಾಯಗಳನ್ನು ವೇಗಗೊಳಿಸುವುದು ಭಾರತದ ಇಂಧನ ಮಹತ್ವಾಕಾಂಕ್ಷೆಗಳಿಗೆ ನಾವು ಹೊಂದಿರುವ ನಮ್ಮ ಬದ್ಧತೆಯನ್ನು ಬಲಪಡಿಸುತ್ತದೆ. ನಾವು ಇಂಗಾಲ ಹೊರಸೂಸುವಿಕೆ ಕಡಿಮೆ ಮಾಡಲು ಉತ್ಸುಕರಾಗಿದ್ದೇವೆ ಭಾರತದಲ್ಲಿ ಕಡಿಮೆ ಇಂಗಾಲದ ಇಂಧನಗಳ ಅಭಿವೃದ್ಧಿ ಮತ್ತು ಅಳವಡಿಕೆಯಿಂದ ಪರಿಸರದ ಮೇಲಾಗುವ ಲಾಭಗಳನ್ನು ಗಮನಿಸಲು ಸಹ ನಾವು ಅತೀವ ಆಸಕ್ತರಾಗಿದ್ದೇವೆ”ಎಂದರು.
ಇನ್ನು ಈ ಸಹಭಾಗಿತ್ವದ ಕುರಿತು ಅಭಿಪ್ರಾಯ ಹಂಚಿಕೊಂಡಿರುವ ಎಚ್ಪಿಸಿಎಲ್, “ನಮ್ಮ ದೇಶ, ಉದ್ಯಮ ಮತ್ತು ಪರಿಸರಕ್ಕೆ ಪ್ರಯೋಜನಕಾರಿಯಾದ ಸುಸ್ಥಿರ ಇಂಧನ ಪರಿಹಾರಗಳನ್ನು ಅಭಿವೃದ್ಧಿಪಡಿಸಲು ಮತ್ತು ಪರಿಮಾಣ ಹೆಚ್ಚಿಸಲು ನಾವು ಬದ್ಧರಾಗಿದ್ದೇವೆ. ಈ ಸಹಭಾಗಿತ್ವವು ದೀರ್ಘಾವಧಿ ಪ್ರಯಾಣದ ಸಾರಿಗೆಯನ್ನು ಇಂಗಾಲ-ಮುಕ್ತ ಮಾಡುವ ಕಡೆಗೆ ಇಟ್ಟಿರುವ ದಿಟ್ಟ ಹೆಜ್ಜೆಯಾಗಿದೆ ಎಂದು ಹೇಳಿದ್ದಾರೆ.