ಮೈಸೂರು:- ಕೋಮುವಾದಿ ರಾಜಕಾರಣ ಕೊನೆಗಾಣಿಸಬೇಕು ಎಂದು ಸಚಿವ ಮಹದೇವಪ್ಪ ಹೇಳಿದ್ದಾರೆ.
ಈ ಸಂಬಂಧ ಮಾತನಾಡಿದ ಅವರು,ಸ್ವಾತಂತ್ರ್ಯ ಸಂಗ್ರಾಮದ ಮೂಲಕ ಸಮೃದ್ಧ ಭಾರತದ ನಿರ್ಮಾಣಕ್ಕೆ ಪೂರಕವಾಗುವಂತೆ ದೇಶದ ಆತ್ಮವಾದ ಸಂವಿಧಾನದ ಆಶಯವನ್ನು ಬಲಪಡಿಸುವ ಕೆಲಸವನ್ನು ಕಾಂಗ್ರೆಸ್ ಮಾಡುತ್ತಿದೆ. ಆದರೆ ಧರ್ಮ ಮತ್ತು ದೇವರ ಹೆಸರಿನಲ್ಲಿ ದೇಶವನ್ನು ವಿಭಜಿಸಲು ಹೊರಟಿರುವ ಕೋಮುವಾದಿ ರಾಜಕಾರಣವನ್ನು ಕೊನೆಗಾಣಿಸಬೇಕಿದೆ ಎಂದರು.
ಚಳವಳಿಗೆ ಆಗಾಧವಾದ ಶಕ್ತಿ ಇದೆ. ಇಂದಿನ ದೇಶದ ಪರಿಸ್ಥಿತಿಗೆ ಅನುಗುಣವಾಗಿ ಚಳವಳಿಯನ್ನು ನಿರಂತರವಾಗಿ ನಡೆಸುವ ಮೂಲಕ ಪ್ರಜಾಪ್ರಭುತ್ವ ಹಾಗೂ ಸಂವಿಧಾನದ ರಕ್ಷಣೆಗಾಗಿ ಎರಡನೇ ಸ್ವಾತಂತ್ರ್ಯ ಸಂಗ್ರಾಮ ಪ್ರಾರಂಭಿಸಲು ಕಾಂಗ್ರೆಸ್ ಪಕ್ಷ ಸಿದ್ಧವಿದೆ ಎಂದು ಹೇಳಿದರು. ಅನೇಕ ಧರ್ಮಗಳು, ವಿವಿಧ ಭಾಷೆಯ ಜನರು ವಾಸಿಸುವ ಬಹುತ್ವದ ಭಾರತಕ್ಕೆ ಕಾಂಗ್ರೆಸ್ ಅನೇಕ ಕೊಡುಗೆಗಳನ್ನು ನೀಡಿದೆ. ಇಂದು ಕೋಮುವಾದ, ಮತೀಯವಾದ, ಧರ್ಮಾಂದತೆ, ಸ್ವಾತಂತ್ರ್ಯದ ಉದ್ದೇಶ ಕಾಂಗ್ರೆಸ್ ಹೋರಾಟದ ಆಶಯಗಳನ್ನು ನಾಶ ಮಾಡಲು ಹೊರಟಿದ್ದಾರೆ. ಭಾರತದ ಇಡೀ ಚರಿತ್ರೆಯನ್ನು ತಿರುಚುವ ಕೆಲಸ ಮಾಡಲಾಗುತ್ತದೆ.
ನಮ್ಮ ನಾಗರೀಕ ಬದುಕನ್ನು, ಸಾಂಸ್ಕೃತಿಕ ಜೀವನ ನಾಶಮಾಡಿ ಬಹುತ್ವಕ್ಕೆ ಭಂಗ ತರುವ ಕೆಲಸ ನಡೆಯುತ್ತಿದೆ. ಹೀಗಾಗಿ ಸರ್ವಾಧಿಕಾರ ಆಡಳಿತವನ್ನು ಕೊನೆಗಾಣಿಸಬೇಕು ಎಂದು ಅವರು ಕರೆ ನೀಡಿದರು. ಕಾಂಗ್ರೆಸ್ ಎಂದರೆ ಒಗ್ಗೂಡುವಿಕೆ ಎಂದರ್ಥ. ಜನರನ್ನು ಒಗ್ಗೂಡಿಸಿ ಜನಶಕ್ತಿಯ ಮೂಲಕ ಪರಕೀಯರು ನಮ್ಮನ್ನು ಆಳುವಿಕೆಯ ವಿರುದ್ಧವಾಗಿ ಕಾಂಗ್ರೆಸ್ ಹೋರಾಟ ಮಾಡಿದೆ. ವಸಹಾತು ಶಾಹಿ ಸಾಮ್ರಾಟದ ವಿರುದ್ಧವಾಗಿ ಸಂಘಟನಾತ್ಮಕವಾಗಿ ಅಹಿಂಸೆ ಮತ್ತು ಅಸಹಕಾರ ಚಳುವಳಿಯನ್ನು ಮಾಡಿರುವ ಕಾಂಗ್ರೆಸ್ನ ಉದ್ದೇಶ ಕೋಮುಸೌರ್ಹದತೆ ಕಾಪಾಡುವುದು, ಅಸ್ಪೃಶ್ಯತೆ ನಿವಾರಣೆ ಮಾಡುವುದು ಆಗಿದೆ ಎಂದು ಅವರು ಹೇಳಿದರು.