ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ 10ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಕೋಲ್ಕತ್ತಾ ನೈಟ್ ರೈಡರ್ಸ್ 7 ವಿಕೆಟ್ಗಳಿಂದ ಸೋಲಿಸಿದೆ.
MP Election: ಕಂಪ್ಲಿಯಲ್ಲಿ ಅಬ್ಬರದ ಪ್ರಚಾರ ಕೈಗೊಂಡ ಬಿಜೆಪಿ ಅಭ್ಯರ್ಥಿ ಬಿ ಶ್ರೀ ರಾಮುಲು!
ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಆರ್ಸಿಬಿ ವಿರಾಟ್ ಕೊಹ್ಲಿ ಅವರ ಅಜೇಯ ಅರ್ಧಶತಕದ ನೆರವಿನಿಂದ 6 ವಿಕೆಟ್ ನಷ್ಟಕ್ಕೆ 182 ರನ್ ಗಳಿಸಿತು. ಆರಂಭದಿಂದಲೇ ಸ್ಫೋಟಕ ಬ್ಯಾಟಿಂಗ್ ಪ್ರದರ್ಶಿಸಿದ ಕೆಕೆಆರ್ 17ನೇ ಓವರ್ನಲ್ಲಿಯೇ ಗುರಿ ಮುಟ್ಟಿತು. ಅಲ್ಲದೆ ತಂಡ ಇನ್ನು 19 ಎಸೆತಗಳು ಬಾಕಿ ಇರುವಾಗಲೇ ಗೆಲುವು ಸಾಧಿಸಿತು. ಈ ಮೂಲಕ ಆರ್ಸಿಬಿ (RCB) ಲೀಗ್ನಲ್ಲಿ ಆಡಿರುವ ಮೂರು ಪಂದ್ಯಗಳಲ್ಲಿ ಎರಡನೇ ಸೋಲನ್ನು ಅನುಭವಿಸಬೇಕಾಯಿತು.
ಚಿನ್ನಸ್ವಾಮಿಯಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಆರ್ಸಿಬಿ ನಿಗದಿತ 20 ಓವರ್ಗಳಲ್ಲಿ 6 ವಿಕೆಟ್ ಕಳೆದುಕೊಂಡು 182 ರನ್ ಕಲೆಹಾಕಿತು. ಚಿನ್ನಸ್ವಾಮಿಯಂತಹ ಅತಿ ಚಿಕ್ಕ ಗ್ರೌಂಡ್ನಲ್ಲಿ ಆರ್ಸಿಬಿ ಕಲೆಹಾಕಿದ 182 ರನ್ ಕೂಡ ಬಹಳ ಸಣ್ಣದಾಗಿತ್ತು. ಪೇಪರ್ ಮೇಲೆ ಅತಿ ಬಲಿಷ್ಠ ತಂಡದಂತೆ ಕಾಣುವ ಆರ್ಸಿಬಿ ಆಡಿರುವ ಮೂರೂ ಪಂದ್ಯಗಳಲ್ಲೂ ಅತ್ಯಂತ ಕಳಪೆ ಪ್ರದರ್ಶನ ನೀಡಿದೆ. ಅದರಲ್ಲೂ ಕೋಟಿ ಕೋಟಿ ಪಡೆದು ಆರ್ಸಿಬಿ ಪಾಳಯ ಸೇರಿಕೊಂಡಿರುವ ವಿದೇಶಿ ಆಟಗಾರರು ಹೋದ ಪುಟ್ಟ ಬಂದ ಪುಟ್ಟ ಪ್ರದರ್ಶನ ನೀಡುತ್ತಿರುವುದು ತಂಡದ ಸೋಲಿಗೆ ಪ್ರಮುಖ ಕಾರಣವಾಗಿದೆ.
ತಂಡದ ನಾಯಕತ್ವ ಹೊತ್ತು ಆರಂಭಿಕರಾಗಿ ಬ್ಯಾಟಿಂಗ್ ಇಳಿಯುತ್ತಿರುವ ಫಾಫ್ ಡು ಪ್ಲೆಸಿಸ್ ಇದುವರೆಗೂ ತಮ್ಮ ಬ್ಯಾಟಿಂಗ್ನಲ್ಲಿ ಕಮಾಲ್ ಮಾಡಿಲ್ಲ. ಆಡಿದ ಮೊದಲ ಪಂದ್ಯದಲ್ಲಿ 35 ರನ್ ಕಲೆಹಾಕಿದ್ದು ಬಿಟ್ಟರೆ ಫಾಫ್ ಬ್ಯಾಟ್ ಮೌನಕ್ಕೆ ಶರಣಾಗಿದೆ. ಉಳಿದ ಎರಡು ಪಂದ್ಯಗಳಲ್ಲಿ ಫಾಫ್ ಕ್ರಮವಾಗಿ 3 ಹಾಗೂ 8 ರನ್ ಕಲೆಹಾಕಲಷ್ಟೇ ಶಕ್ತರಾಗಿದ್ದಾರೆ. ಆರಂಭಿಕನಾಗಿ ತಂಡಕ್ಕೆ ಬಲಿಷ್ಠ ಆರಂಭ ಒದಗಿಸಬೇಕಾದ ನಾಯಕನೇ ಬಂದಷ್ಟೇ ವೇಗವಾಗಿ ಪೆವಿಲಿಯನ್ ಸೇರಿಕೊಳ್ಳುತ್ತಿರುವುದು ತಂಡವನ್ನು ಸಂಕಷ್ಟಕ್ಕೆ ತಳ್ಳಿದೆ.
ಮೇಲೆ ಹೇಳಿದಂತೆ ಆರ್ಸಿಬಿ ತಂಡ ಪೇಪರ್ ಮೇಲೆ ಬಲಿಷ್ಠವಾಗಿ ಕಾಣಲು ಖ್ಯಾತ ವಿದೇಶಿ ಆಟಗಾರರೇ ಕಾರಣ. ಆದರೆ ಇದುವರೆಗೂ ಅವರಿಂದ ಯಾವುದೇ ಹೇಳಿಕೊಳ್ಳುವಂತಹ ಪ್ರದರ್ಶನ ಕಂಡುಬಂದಿಲ್ಲ. ಅದರಲ್ಲೂ ತಂಡದ ಮಧ್ಯಮ ಕ್ರಮಾಂಕದ ಆಧಾರ ಸ್ತಂಭವಾಗಿರುವ ಗ್ಲೆನ್ ಮ್ಯಾಕ್ಸ್ವೆಲ್ ಬಿಗ್ ಇನ್ನಿಂಗ್ಸ್ ಆಡುವುದಿರಲಿ, ತಂಡಕ್ಕೆ ನೆರವಾಗುವಂತಹ ಒಂದೇ ಒಂದು ಇನ್ನಿಂಗ್ಸ್ ಆಡಿಲ್ಲ. ಮೊದಲ ಪಂದ್ಯದಲ್ಲಿ ಸೊನ್ನೆಗೆ ವಿಕೆಟ್ ಒಪ್ಪಿಸಿದ್ದ ಮ್ಯಾಕ್ಸ್ವೆಲ್, 2ನೇ ಪಂದ್ಯದಲ್ಲಿ 3 ರನ್ಗಳಿಗೆ ಸುಸ್ತಾಗಿದ್ದರು. ಮೂರನೇ ಪಂದ್ಯದಲ್ಲಿ ಎರಡೆರಡು ಜೀವದಾನಗಳು ಸಿಕ್ಕ ನಂತರವೂ ಮ್ಯಾಕ್ಸ್ವೆಲ್ ಇನ್ನಿಂಗ್ಸ್ 28 ರನ್ಗಳಿಗೆ ಮುಗಿದಿತ್ತು. ಬೌಲಿಂಗ್ನಲ್ಲೂ ಮ್ಯಾಕ್ಸ್ವೆಲ್ ಪ್ರದರ್ಶನ ಅಷ್ಟಕಷ್ಟೆ.
17.5 ಕೋಟಿ ನೀಡಿ ಮುಂಬೈನಿಂದ ಟ್ರೇಡಿಂಗ್ ಮಾಡಿಕೊಂಡಿದ್ದ ಆಸ್ಟ್ರೇಲಿಯಾದ ಆಲ್ರೌಂಡರ್ ಕ್ಯಾಮರೂನ್ ಗ್ರೀನ್ ತಾವು ಪಡೆದ ಬೆಲೆಗೆ ನ್ಯಾಯ ಒದಗಿಸುವ ಪ್ರಯತ್ನ ಮಾಡುತ್ತಿದ್ದರಾದರೂ ಅವರ ಆಟ ಪ್ರೇಕ್ಷಕರಿಗೆ ರುಚಿಸುತ್ತಿಲ್ಲ. ಇದಕ್ಕೆ ಕಾರಣ ಅವರ ಆಮೆಗತಿಯ ಬ್ಯಾಟಿಂಗ್. ಮೂರೂ ಪಂದ್ಯಗಳಲ್ಲೂ ಅಬ್ಬರದ ಇನ್ನಿಂಗ್ಸ್ ಅಲ್ಲದಿದ್ದರೂ ಎರಡಂಕಿಯ ಮೊತ್ತ ಕಲೆಹಾಕುತ್ತಿರುವ ಗ್ರೀನ್ ಬ್ಯಾಟ್ ಅಬ್ಬರಿಸುತ್ತಿಲ್ಲ.
ಆಡಿರುವ ಮೂರು ಪಂದ್ಯಗಳಲ್ಲೂ ಬೌಲಿಂಗ್ನಲ್ಲಿ ಅತಿ ದುಬಾರಿಯಾಗಿರುವ ಅಲ್ಜಾರಿ ಜೋಸೆಫ್ರನ್ನು ತಂಡದ ಆಡಳಿತ ಮಂಡಳಿ ಪದೇ ಪದೇ ಆಡುವ ಹನ್ನೊಂದರ ಬಳಗದಲ್ಲಿ ಏಕೆ ಆಯ್ಕೆ ಮಾಡುತ್ತಿದೆ ಎಂಬುದನ್ನು ಆ ದೇವರೇ ಬಲ್ಲ. ಕೇವಲ ವೇಗವಾಗಿ ಎಸೆಯುವುದನ್ನು ಬಿಟ್ಟರೆ ಜೋಸೆಫ್ ಬೌಲಿಂಗ್ನಲ್ಲಿ ಹೇಳಿಕೊಳ್ಳುವಂತಹ ವ್ಯತ್ಯಾಸ ಕಂಡುಬರುತ್ತಿಲ್ಲ. ಹೀಗಾಗಿಯೇ ಮೊದಲ ಓವರ್ನಿಂದಲೇ ಜೋಸೆಫ್ಗೆ ಎದುರಾಳಿ ತಂಡದ ಬ್ಯಾಟರ್ಗಳು ಬೌಂಡರಿ ಸಿಕ್ಸರ್ಗಳ ಉಡುಗೊರೆ ನೀಡುತ್ತಿದ್ದಾರೆ.