ಬೆಂಗಳೂರು: ನಾಲ್ಕು ವರ್ಷಗಳ ಕಾಲ ದುರಾಡಳಿತ ಮತ್ತು ಭ್ರಷ್ಟಾಚಾರದ ಹಗರಣಗಳಲ್ಲಿಯೇ ಕಾಲ ಕಳೆದಿದ್ದ ಬಿಜೆಪಿ ಪಕ್ಷಕ್ಕೆ ಸರ್ಕಾರದ ಸಾಧನೆಗಳಿಗೆ ವ್ಯಕ್ತವಾಗುತ್ತಿರುವ ಜನಸ್ಪಂದನೆ ಅವರಿಗೆ ಭಯ ಹುಟ್ಟಿಸುತ್ತಿದೆ. ಇದಕ್ಕಾಗಿ ಹುಬ್ಬಳ್ಳಿಯ ಕ್ರಿಮಿನಲ್ ಆರೋಪಿಯೊಬ್ಬನ ಬಂಧನದ ಎಳೆ ಹಿಡಿದುಕೊಂಡು ನೇತಾಡುತ್ತಿದ್ದಾರೆ ಎಂದು ಬಿಜೆಪಿ ನಾಯಕರ ವಿರುದ್ಧ ಸಿಎಂ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.
ಈ ಕುರಿತು ಅವರು ಬುಧವಾರ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ್ದು, “ಅಪರಾಧಿಗಳಿಗೆ ಜಾತಿ, ಧರ್ಮಗಳ ಬಣ್ಣ ಹಚ್ಚುವುದು ಅತ್ಯಂತ ಅಪಾಯಕಾರಿ ಎನ್ನುವುದನ್ನು ಬಿಜೆಪಿ ನಾಯಕರು ಅರ್ಥಮಾಡಿಕೊಳ್ಳಬೇಕು” ಎಂದು ಹೇಳಿದ್ದಾರೆ.
DVS Vs BKH: ದೇಶದ ನಂಬರ್ ಒನ್ ಭಯೋತ್ಪಾದಕ ಬಿ.ಕೆ. ಹರಿಪ್ರಸಾದ್: ಸದಾನಂದಗೌಡ
“ರಾಜ್ಯದಲ್ಲಿ ಹಿಂದೆ ಬಿಜೆಪಿ ಸರ್ಕಾರ ಇದ್ದಾಗಲೇ ಲೋಕಾಯುಕ್ತ ಪೊಲೀಸರು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರನ್ನು ಬಂಧಿಸಿ ಜೈಲಿಗಟ್ಟಿದ್ದರು. ಯಡಿಯೂರಪ್ಪನವರಿಗಿಂತ ದೊಡ್ಡ ಹಿಂದೂ? ರಾಮ ಭಕ್ತ ಯಾರಿದ್ದಾರೆ? ಹಾಗಿದ್ದರೆ ಆಗಿನ ಸರ್ಕಾರ ಹಿಂದು ವಿರೋಧಿಯೇ? ಬಿಜೆಪಿ ಬಿಟ್ಟು ಬಿಡಿ, ಅದರ ಪರಿವಾರದ ನಾಯಕರು ಕೂಡಾ ಹಿಂದೂ ಯಡಿಯೂರಪ್ಪನವರನ್ನು ಬಂಧಿಸಿದ ಸರ್ಕಾರ ಹಿಂದೂ ವಿರೋಧಿ ಎಂದು ಕೂಗಾಡಲಿಲ್ಲವಲ್ಲ? ಈಗ ಯಾಕೆ ಈ ಕೂಗಾಟ” ಎಂದು ಪ್ರಶ್ನಿಸಿದ್ದಾರೆ.
“ರಾಜ್ಯದ ಬಿಜೆಪಿಯ ಸ್ಥಿತಿ ಒಂದು ಮನೆ ನೂರು ಬಾಗಿಲು ಎಂಬಂತಾಗಿದೆ. ಆ ಪಕ್ಷದ ರಾಜ್ಯಾಧ್ಯಕ್ಷರನ್ನು ಅದೇ ಪಕ್ಷದ ಹಿರಿಯ ನಾಯಕರು ಈಗಲೂ ಒಪ್ಪಿಕೊಂಡಿಲ್ಲ, ವಿರೋಧ ಪಕ್ಷದ ನಾಯಕರ ಮಾತಿಗೆ ಸದನದಲ್ಲಿಯೇ ಸದಸ್ಯರು ಬಿಡಿಗಾಸಿನ ಕಿಮ್ಮತ್ತು ಕೊಟ್ಟಿಲ್ಲ. ಯಡಿಯೂರಪ್ಪ ಮತ್ತು ಮಕ್ಕಳ ವಿರುದ್ಧ ದಿನಕ್ಕೊಂದು ಗಂಭೀರ ಸ್ವರೂಪದ ಆರೋಪ ಮಾಡುತ್ತಿರುವ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರಿಗೆ ಕನಿಷ್ಠ ಒಂದು ಎಚ್ಚರಿಕೆಯ ನೋಟಿಸ್ ನೀಡಲಾಗದಷ್ಟು ಪಕ್ಷ ನಿರ್ವಿರ್ಯವಾಗಿದೆ. ಕಾಂಗ್ರೆಸ್ ಸರ್ಕಾರ ದಿನದಿಂದ ದಿನಕ್ಕೆ ಜನಾನುರಾಗಿಯಾಗುತ್ತಿದೆ. ಈ ಹತಾಶೆಯಿಂದ ಹೊರಬರಲು ಒಬ್ಬ ಕ್ರಿಮಿನಲ್ ಆರೋಪಿಯನ್ನು ಮುಂದಿಟ್ಟು ಬಿಜೆಪಿ ನಾಯಕರು ಕೂಗಾಡುತ್ತಿದ್ದಾರೆ” ಎಂದು ಟೀಕಿಸಿದ್ದಾರೆ.