ಬಿಜೆಪಿಯ ಆಂತರಿಕ ಭಿನ್ನಮತ ಶಮನಕ್ಕೆ ಹೈಕಮಾಂಡ್ ಕೊನೆಗೂ ಫೀಲ್ಡ್ ಗೆ ಇಳಿದಂತೆ ಕಾಣ್ತಿದೆ, ಇದರ ಮೊದಲ ಭಾಗವಾಗಿ ರಾಜ್ಯ ಉಸ್ತುವಾರಿ ರಾಧಾ ಮೋಹನ್ ಅಗರ್ವಾಲ್ ಶಾಸಕರ ಸಭೆ ನಡೆಸಿದ್ರು, ಈ ಸಭೆಗೂ ರೆಬಲ್ ನಾಯಕರು ಗೈರಾದ್ರು. ಇನ್ನು ಕೋರ್ ಕಮಿಟಿ ಸಭೆಯಲ್ಲೂ ಅಸಮಾಧಾನ ಸ್ಟೋಟಗೊಂಡಿದೆ ಜಿಲ್ಲಾಧ್ಯಕ್ಷರ ನೇಮಕಕ್ಕೆ ಶ್ರೀರಾಮುಲು ಅಸಮಾಧಾನ ಹೊರಹಾಕಿದ್ದಾರೆ. ಈ ಮಧ್ಯೆ ಸಂಡೂರು ಸೋಲಿಗೆ ರಾಮುಲು vs ಜನಾರ್ಧನ ರೆಡ್ಡಿ ಮಧ್ಯೆ ಕೋಲ್ಡ್ ವಾರ್ ಶುರುವಾಗಿದೆ..
ಬಿಜೆಪಿಯ ಆಂತರಿಕ ಭಿನ್ನಮತ ಹಾದಿ ಬೀದಿ ಜಗಳವಾಗಿದೆ, ಹೋದಲ್ಲಿ ಬಂದಲ್ಲಿ ವಿಜಯೇಂದ್ರ vs ಯತ್ನಾಳ್ ಬಣಗಳು ಕಚ್ಚಾಡ್ತಿವೆ. ಈ ಬಣ ಬಡಿದಾಟಕ್ಕೆ ಬ್ರೇಕ್ ಹಾಕಲು ಹೈಕಮಾಂಡ್ ಕೊನೆಗೂ ಮುಂದಾಗಿದ್ದು ಇದರ ಮೊದಲ ಭಾಗವಾಗಿ ರಾಜ್ಯ ಬಿಜೆಪಿ ಉಸ್ತುವಾರಿ ರಾಧಾ ಮೋಹನ್ ಅಗರ್ವಾಲ್ ಶಾಸಕರು, ಸಂಸದರ ಸಭೆ ನಡೆಸಿದ್ರು. ಮಲ್ಲೇಶ್ವರಂನ ಬಿಜೆಪಿ ಕೇಂದ್ರ ಕಛೇರಿಯಲ್ಲಿ ಸುಮಾರು 3 ಗಂಟೆಗಳ ಕಾಲ ಸಭೆ ನಡೆಯಿತು..
ರಾಧಾ ಮೋಹನ್ ಅಗರ್ವಾಲ್ ಕರೆದ ಸಭೆಗೆ ರೆಬಲ್ ಶಾಸಕರಾದ ಬಸನಗೌಡ ಪಾಟೀಲ್ ಯತ್ನಾಳ್, ರಮೇಶ್ ಜಾರಕಿಹೊಳಿ ಗೈರಾಗಿದ್ದರು. ಪಕ್ಷದಿಂದ ಅಂತರ ಕಾಯ್ದುಕೊಂಡಿರುವ ಎಸ್ಟಿ ಸೋಮಶೇಖರ್, ಶಿವರಾಮ್ ಹೆಬ್ಬಾರ್ ಕೂಡ ಬಂದಿರಲಿಲ್ಲ. ಉಳಿದಂತೆ 48 ಶಾಸಕರು, ಸಂಸದರಲ್ಲಿ ಡಾ.ಕೆ. ಸುಧಾಕರ್, ಬ್ರಿಜೇಶ್ ಚೌಟ ಪಾಲ್ಗೊಂಡಿದ್ದರು. ಇನ್ನು ಸಭೆಯಲ್ಲಿ ಬಿಜೆಪಿಯಲ್ಲಿ ನಡೆಯುತ್ತಿರುವ ಬಣ ಸಂಘರ್ಷದ ಬಗ್ಗೆ ದೊಡ್ಡ ಮಟ್ಟದಲ್ಲಿ ಅಸಮಾಧಾನ ಸ್ಪೋಟಗೊಳ್ತು.
ಚಳಿಗಾಲದಲ್ಲಿ ಬಾಳೆಹಣ್ಣು ತಿನ್ನಬಹುದೇ..? ತಿಂದ್ರೆ ಏನಾಗುತ್ತದೆ.? ಇಲ್ಲಿದೆ ನೋಡಿ ಮಾಹಿತಿ
ಇದಕ್ಕೆ ಕಡಿವಾಣ ಹಾಕದಿದ್ದರೆ ತಲೆ ಎತ್ತಿ ನಡೆಯುವುದು ಕಷ್ಟ, ಪಕ್ಷದ ಭವಿಷ್ಯಕ್ಕೂ ಕುತ್ತು ಬರಲಿದೆ ಎಂದು ಶಾಸಕರು ಆತಂಕ ವ್ಯಕ್ತಪಡಿಸಿದ್ರು. ಈ ವಿದ್ಯಮಾನವನ್ನು ಗಂಭೀರವಾಗಿ ಪರಿಗಣಿಸಿ ಕಠಿಣ ಕ್ರಮ ಕೈಗೊಳ್ಳದಿದ್ದರೆ ದಕ್ಷಿಣ ಭಾರತದ ಹೆಬ್ಬಾಗಿಲನ್ನು ಪಕ್ಷ ಶಾಶ್ವತವಾಗಿ ಕಳೆದುಕೊಳ್ಳುವ ಸನ್ನಿವೇಶ ಸೃಷ್ಟಿಯಾಗಲಿದೆ ಎಂದು ನೇರವಾಗಿ ಹೇಳಿದ್ದಾರೆ ಕೆಲ ಶಾಸಕರು. ಶಾಸಕರ ಮಾತುಗಳನ್ನು ಆಲಿಸಿದ ಉಸ್ತುವಾರಿ ರಾಧಾಮೋಹನ್ ದಾಸ್ ಅಗರ್ವಾಲ್, ಈ ಎಲ್ಲ ವಿಚಾರಗಳನ್ನೂ ಹೈಕಮಾಂಡ್ ಗಮನಕ್ಕೆ ತರುವುದಾಗಿ ಭರವಸೆ ನೀಡಿದ್ದಾರೆ.
ಇನ್ನು ರಾಜ್ಯ ಬಿಜೆಪಿ ಕೋರ್ ಕಮಿಟಿ ಸಭೆಯಲ್ಲೂ ಬಂಡಾಯದ್ದೇ ಚರ್ಚೆಯಾಗಿದೆ ಸಭೆಯಲ್ಲಿ ಪಕ್ಷದ ನಾಯಕರ ವಿರುದ್ಧ ಕೋರ್ ಕಮಿಟಿ ಸದಸ್ಯರು ಮುನಿಸಿಕೊಂಡ್ರೆ. ಜಿಲ್ಲಾಧ್ಯಕ್ಷರ ನೇಮಕ ವಿಚಾರವಾಗಿ ಸಭೆಯಲ್ಲಿ ಶ್ರೀರಾಮುಲು ಅಸಮಾಧಾನ ಹೊರಹಾಕಿದ್ದಾರೆ . ಸಂಡೂರು ಸೋಲಿನ ವಿಚಾರವೂ ಚರ್ಚೆಯಾಗಿದ್ದು, ಬಣ ಬಡಿದಾಟಕ್ಕೆ ಬ್ರೇಕ್ ಹಾಕಬೇಕು ಅಂತ ಹಿರಿಯರು ಸಲಹೆ ನೀಡಿದ್ದಾರೆ.…
ಈ ಮಧ್ಯೆ ಸಂಡೂರು ಉಪ ಚುನಾವಣೆ ಸೋಲು ಕುಚುಕು ಗೆಳೆಯರಾದ ಶ್ರೀರಾಮುಲು ಹಾಗೂ ಗಾಲಿ ಜನಾರ್ಧನ ರೆಡ್ಡಿ ಮಧ್ಯೆ ಕೋಲ್ಡ್ ವಾರ್ ಗೆ ವೇದಿಕೆಯಾಗಿದೆ. ಬಿಜೆಪಿ ಅಭ್ಯರ್ಥಿ ಬಂಗಾರು ಹನುಮಂತು ಗೆಲ್ಲಬಾರದು ಅಂತ ರಾಮುಲು ಪಕ್ಷದ ವಿರುದ್ಧವೇ ಕುತಂತ್ರ ಮಾಡಿದ್ದಾರೆ ಅಂರ ರೆಡ್ಡಿ ಆಕ್ರೋಶ ಹೊರಹಾಕಿದ್ದಾರೆ. ಇದೀಗ ಈ ವಿಚಾರ ಬಿಜೆಪಿಗೆ ಮತ್ತೊಂದು ತಲೆಬಿಸಿ ತಂದೊಡ್ಡಿದೆ..
ಒಟ್ನಲ್ಲಿ ಬಿಜೆಪಿಯ ಬಣ ಬಡಿದಾಟ ಕೂಲ್ ಆಗೋ ಸಾಧ್ಯತೆಗಳಂತೂ ಕಾಣ್ತಿಲ್ಲ, ಕೋರ್ ಕಮಿಟಿ ಸಭೆ, ಉಸ್ತುವಾರಿ ಕರೆದ ಶಾಸಕರ ಸಭೆಯಲ್ಲೂ ಅಸಮಾಧಾನ ನಿಂತಿಲ್ಲ ಅಲ್ಲೂ ನಾಯಕರು ತಮ್ಮ ಆಕ್ರೋಶ ಮುಂದುವರೆಸಿದ್ದಾರೆ. ಈ ಮಧ್ಯೆ ಬಳ್ಳಾರಿ ಕುಚುಕುಗಳ ಕೋಲ್ಡ್ ವಾರ್ ಬೇರೆ ತಾರಕಕ್ಕೇರ್ತಿದ್ದು, ರಾಜ್ಯ ಬಿಜೆಪಿ ಒಡೆದ ಮನೆಯಲ್ಲ, ಫಿಶ್ ಮಾರ್ಕೆಟ್ ರಗಳೆ ಅನ್ನೋತರ ಆಗಿದೆ.