ಬೆಂಗಳೂರು: ಸಿಎಂ ಸಿದ್ದರಾಮಯ್ಯ ಮತ್ತು ಕೇಂದ್ರ ಸಚಿವ ವಿ.ಸೋಮಣ್ಣ ಪರಸ್ಪರ ಮುಖಾಮುಖಿಯಾಗಿದ್ದಾರೆ. ಈ ವೇಳೆ ಉಭಯನಾಯಕರು ಮುಡಾ ಬಗ್ಗೆ ಚರ್ಚಿಸಿದ್ದು ಸ್ವಾರಸ್ಯಕರವಾಗಿತ್ತು. ನಗರದ ರಮಣಶ್ರೀ ಹೋಟೆಲ್ ಆವರಣದಲ್ಲಿ ವಿ ಸೋಮಣ್ಣ ಹಾಗೂ ಸಿಎಂ ಸಿದ್ದರಾಮಯ್ಯ ಎದುರುಬದುರಾಗಿದ್ದಾರೆ. ಈ ವೇಳೆ ಇಬ್ಬರು ಸಹ ನಗುನಗುತ್ತಲೇ ಮುಡಾ ಹಗರಣದ ಬಗ್ಗೆ ಚರ್ಚೆ ಮಾಡಿದ್ದಾರೆ.
ಮೊದಲಿಗೆ ಇಬ್ಬರೂ ನಾಯಕರು ಪರಸ್ಪರ ಕುಶಲೋಪರಿ ವಿಚಾರಿಸಿಕೊಂಡರು. ಈ ವೇಳೆ, ಮುಡಾ ಸೈಟ್ ವಿಚಾರ ಪ್ರಸ್ತಾಪಿಸಿದ ವಿ.ಸೋಮಣ್ಣ, ಸಿದ್ದರಾಮಣ್ಣ ಅಂದೇ ಹೇಳಿದ್ದೆ. ಸಿದ್ದರಾಮಣ್ಣ ವಿಚಾರದಲ್ಲಿ ನಂದು ಏನಿದ್ದರೂ ನೇರ ಮಾತು. ಬೇರೆಯವರ ಹಾಗೆ ಹೆದರಿಸುವುದು, ಹಿಂದೊಂದು ಮುಂದೊಂದು ಮಾಡುವುದು ನನಗೆ ಗೊತ್ತಿಲ್ಲ. ನನ್ನ ಮಾತು ಕೇಳಿದ್ದರೆ ಇಷ್ಟೆಲ್ಲ ಆಗುತ್ತಿತ್ತಾ..? ಸಣ್ಣ ವಿಚಾರಕ್ಕೆ ಇಷ್ಟೆಲ್ಲಾ ಆಗುತ್ತಿದೆ. ಅಂದೇ ನನ್ನ ಮಾತು ಕೇಳಬೇಕಿತ್ತು ಎಂದರು. ಸೋಮಣ್ಣ ಮಾತಿಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಅದು ಹಾಗಲ್ಲ, ಸುಳ್ಳು ಹೇಳ್ತಾವ್ರೆ ಕಣಯ್ಯಾ. ನನ್ನ ಮಾತು ಕೇಳು. ಗೊತ್ತಿಲ್ಲದೇ ಏನೇನೋ ಮಾತನಾಡಬೇಡ ಎಂದರು. ಇವರಿಬ್ಬರ ಈ ಚರ್ಚೆ ಗಮನ ಸೆಳೆದಿದ್ದಂತೂ ನಿಜ.