ಬೆಂಗಳೂರು:- CM ಸಿದ್ದುಗೆ ಸಾಲದ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ ಎಂದು ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಹೇಳಿದ್ದಾರೆ.
ಈ ಸಂಬಂಧ ಮಾತನಾಡಿದ ಅವರು,ಪ್ರಧಾನಿ ನರೇಂದ್ರ ಮೋದಿ ಅವರು ದೇಶವನ್ನು ದಿವಾಳಿ ಮಾಡಿದ್ದಾರೆ ಎಂದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ತಮ್ಮ ಹಿಂದಿನ ಐದು ವರ್ಷಗಳ ಅವಧಿಯಲ್ಲಿ 2.45 ಲಕ್ಷ ಕೋಟಿ ರು. ಸಾಲ ಮಾಡಿದ್ದರು. ಸಾಲದ ಬಗ್ಗೆ ಮಾತನಾಡಲು ಇವರಿಗೆ ಯಾವ ನೈತಿಕತೆ ಇದೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.
ನನ್ನ 20 ತಿಂಗಳ ಅವಧಿಯಲ್ಲಿ 3,500 ಕೋಟಿ ರು. ಸಾಲ ಮಾಡಲಾಗಿತ್ತು. ಹಿಂದೆ 5 ವರ್ಷ ಸಿಎಂ ಆಗಿದ್ದ ಸಿದ್ದರಾಮಯ್ಯ 2,45,000 ಕೋಟಿ ರು. ಸಾಲ ಮಾಡಿದ್ದರು.
ಈಗ 85,815 ಕೋಟಿ ರು. ಸಾಲ ಮಾಡಲು ಹೊರಟಿದ್ದಾರೆ. ಹಾಲಿ ರಾಜ್ಯದ ಸಾಲ ಪ್ರಮಾಣ 5,71,600 ಕೋಟಿ ರು. ಇದೆ. ಪ್ರತಿ ವರ್ಷ 56,000 ಕೋಟಿ ರು. ಬಡ್ಡಿ ಕಟ್ಟಬೇಕು ಎಂದು ಸಿಎಂ ಹೇಳಿದ್ದಾರೆ. ಸಾಲದ ಬಗ್ಗೆ ಮಾತನಾಡಲು ಅವರಿಗೆ ಯಾವ ನೈತಿಕತೆ ಇದೆ ಎಂದು ಪ್ರಶ್ನಿಸಿದರು. ಉಚಿತ ಯೋಜನೆಗಳಿಂದ ಕರ್ನಾಟಕದ ಅಭಿವೃದ್ಧಿಗೆ ಹಿನ್ನಡೆಯಾಗಿದೆ ಎಂಬ ಪ್ರಧಾನಿ ಮೋದಿಯವರ ಭಾಷಣಕ್ಕೆ ಪ್ರತಿಯಾಗಿ, ತೆಲಂಗಾಣ ಚುನಾವಣಾ ಪ್ರಚಾರದ ವೇಳೆ ಮೋದಿ ಸರ್ಕಾರವೇ ದೇಶವನ್ನು ದಿವಾಳಿ ಮಾಡಿದೆ ಎಂದು ಸಿದ್ದರಾಮಯ್ಯ ಟೀಕಿಸಿದ್ದರು.
ನನ್ನ ಜಿಲ್ಲೆಯ ಅಭಿವೃದ್ಧಿ ಕುರಿತು ಯಾವುದೇ ತಕರಾರು ಇಲ್ಲ. ಬಿಡದಿ ಗ್ರೇಟರ್ ಬೆಂಗಳೂರು ಸೇರ್ಪಡೆ ಸೇರಿದಂತೆ ಇಂತಹ ಇನ್ನೂ ಇಪ್ಪತ್ತು ಘೋಷಣೆ ಮಾಡಲಿ. ಏನು ಗ್ರೇಟರ್ ಬೆಂಗಳೂರು ಮಾಡುತ್ತಾರೋ ಮಾಡಲಿ. ಈಗ ನಾವು ಬೆಂಗಳೂರನ್ನೇ ನೋಡುತ್ತಿಲ್ಲವಾ? ಮಳೆ ಬಂದಾಗ ಬೆಂಗಳೂರು ಏನಾಗುತ್ತಿದೆ ಗೊತ್ತಿಲ್ಲವಾ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಬಿಡದಿ ಗ್ರೇಟರ್ ಬೆಂಗಳೂರು ಸೇರ್ಪಡೆ ವಿಚಾರಕ್ಕೆ ಮಾಜಿ ಸಿಎಂ ಕುಮಾರಸ್ವಾಮಿ ತಿರುಗೇಟು ನೀಡಿದರು.