ಮಂಡ್ಯ :- ಮದ್ದೂರು ಪಟ್ಟಣಕ್ಕೆ ಆಗಮಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಶಾಸಕ ಕೆ.ಎಂ.ಉದಯ್ ನೇತೃತ್ವದಲ್ಲಿ ನೂರಾರು ಕಾಂಗ್ರೆಸ್ ಮುಖಂಡರು ಶಿವಪುರದ ಕಾಂಗ್ರೆಸ್ ಕಚೇರಿ ಆವರಣದಲ್ಲಿ ಕ್ರೇನ್ ಮೂಲಕ ಭಾರಿ ಗಾತ್ರದ ಹೂವಿನ ಹಾರ ಹಾಕುವ ಮೂಲಕ ಅದ್ದೂರಿಯಾಗಿ ಅಭಿನಂದಿಸಿದರು. ಶಿವಪುರದ ವೆಂಕಟೇಶ್ವರ ಕಲ್ಯಾಣ ಮಂಟಪದಲ್ಲಿ ಶನಿವಾರ ರಾತ್ರಿ ನಡೆದ ಖಾಸಗಿ ಕಾರ್ಯಕ್ರಮಕ್ಕೆ ಅಗಮಿಸುವ ಮುನ್ನ ಕಾಂಗ್ರೆಸ್ ಕಚೇರಿ ಆವರಣದಲ್ಲಿ ಸಿಎಂ ಸಿದ್ದರಾಮಯ್ಯ ಹಾಗೂ ಗಣ್ಯರನ್ನು ಪಟಾಕಿ ಸಿಡಿಸಿ, ಬೃಹತ್ ಹೂವಿನ ಹಾರ ಹಾಕಿ ಸಡಗರ ಸಂಭ್ರಮದಿಂದ ಬರ ಮಾಡಿಕೊಳ್ಳಲಾಯಿತು.
ವಿವಾಹ ವಾರ್ಷಿಕೋತ್ಸವದಲ್ಲಿ ಪಾಲ್ಗೊಂಡ ನಂತರ ಮುಖ್ಯಮಂತ್ರಿ ಸಿದ್ದರಾಮಯ್ಯ ಕದಲೂರು ಗ್ರಾಮದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕದಲೂರು ರಾಮಕೃಷ್ಣ ಅವರ ನಿವಾಸಕ್ಕೆ ಭೇಟಿ ನೀಡಿ ಅಭಿನಂದನೆ ಸ್ವೀಕರಿಸಿದರು. ಬಳಿಕ, ಶಾಸಕ ಕೆ.ಎಂ.ಉದಯ್ ಅವರ ನಿವಾಸಕ್ಕೆ ಸಿಎಂ ಸಿದ್ದರಾಮಯ್ಯ ಆಗಮಿಸಿ ಮುಂಬರುವ ಲೋಕಸಭಾ, ಜಿಪಂ ಹಾಗೂ ತಾಪಂ ಚುನಾವಣೆಗಳಲ್ಲಿ ಪಕ್ಷದ ಅಭ್ಯರ್ಥಿಗಳನ್ನು ಯಾವ ರೀತಿ ಗೆಲ್ಲಿಸಬೇಕು ಮತ್ತು ಪಕ್ಷದ ಸಂಘಟನೆ ಹೇಗೆ ಮಾಡಬೇಕು ಎಂಬುವುದರ ಬಗ್ಗೆ ಒಂದು ಗಂಟೆಗೂ ಅಧಿಕ ಕಾಲ ಶಾಸಕರು ಹಾಗೂ ಸಚಿವರೊಂದಿಗೆ ಗೌಪ್ಯ ಸಭೆ ನಡೆಸಿದರು.
ಜತೆಗೆ, ಶಾಸಕ ಕೆ.ಎಂ.ಉದಯ್ ಅವರ ಬಳಿ ಕ್ಷೇತ್ರದ ಅಭಿವೃದ್ಧಿ ಕಾರ್ಯಗಳ ಕುರಿತು ಚರ್ಚೆ ಮಾಡಿದರು. ನಂತರ ಶಾಸಕ ಕೆ.ಎಂ.ಉದಯ್ ದಂಪತಿ ಅವರಿಂದ ಅಭಿನಂದನೆ ಸ್ವೀಕರಿಸಿ ಬೆಂಗಳೂರಿಗೆ ತೆರಳಿದರು. ಇನ್ನು ಸಿದ್ದರಾಮಯ್ಯ ಅಗಮನದ ಹಿನ್ನೆಲೆಯಲ್ಲಿ ಶಿವಪುರ ಮತ್ತು ಕದಲೂರು ಗ್ರಾಮದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಆಯೋಜನೆ ಮಾಡಲಾಗಿತ್ತು. ಕದಲೂರು ಗ್ರಾಮವನ್ನು ನವ ವಧುವಿನಂತೆ ಸಿಂಗರಿಸಲಾಗಿತ್ತು.
ಇದೇ ವೇಳೆ ಕೃಷಿ ಸಚಿವ ಎನ್.ಚಲುವರಾಯಸ್ವಾಮಿ, ಶಾಸಕರಾದ ಕೆ.ಎಂ.ಉದಯ್, ಗಣಿಗ ರವಿ, ನರೇಂದ್ರಸ್ವಾಮಿ, ವಿಧಾನ ಪರಿಷತ್ ಸದಸ್ಯ ಮರಿತಿಬ್ಬೇಗೌಡ, ಜಿಲ್ಲಾಧ್ಯಕ್ಷ ಸಿ.ಡಿ.ಗಂಗಾಧರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕದಲೂರು ರಾಮಕೃಷ್ಣ, ಗ್ರಾಪಂ ಅಧ್ಯಕ್ಷ ತಿಮ್ಮೇಗೌಡ, ಮಾಜಿ ಅಧ್ಯಕ್ಷ ಮಧು, ತಾಪಂ ಮಾಜಿ ಸದಸ್ಯರಾದ ಕೆ.ಆರ್.ಮಹೇಶ್, ಚಲುವರಾಜು, ಮುಖಂಡರಾದ ಶಿವಣ್ಣ, ವಿನಯ್ ರಾಮಕೃಷ್ಣ, ಅಭಿಲಾಷ್ ಸೇರಿದಂತೆ ಇತರರು ಇದ್ದರು.
ವರದಿ : ಗಿರೀಶ್ ರಾಜ್ ಮಂಡ್ಯ