ಬೆಂಗಳೂರು:- ರೈತರಿಗೆ ವಕ್ಫ್ ಕೊಟ್ಟ ನೋಟಿಸ್ ವಾಪಸ್ ಪಡೆಯಲು CM ಸೂಚನೆ ಕೊಟ್ಟಿದ್ದಾರೆ ಎಂದು ಜಿ ಪರಮೇಶ್ವರ್ ಹೇಳಿದ್ದಾರೆ.
ವಕ್ಫ್ ಬೋರ್ಡ್ ಆಸ್ತಿ ವಿಚಾರವಾಗಿ ರೈತರಿಗೆ ನೋಟಿಸ್ ಯಾವುದೇ ನೋಟಿಸ್ ಕೊಡಬೇಡಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಕೊಟ್ಟಿರುವ ನೋಟಿಸ್ ವಾಪಸ್ ಪಡೆಯಿರಿ ಎಂದಿದ್ದಾರೆ. ತುಮಕೂರಿನಲ್ಲಿ ಯಾರಿಗೂ ವಕ್ಫ್ ನೋಟಿಸ್ ಕೊಟ್ಟಿಲ್ಲ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದರು.
ಇಲ್ಲಿಗೆ ಇದು ಮುಗಿದು ಹೋದ ಅಧ್ಯಾಯ. ಮುಂದೆ ಯಾವ ರೀತಿ ಬೆಳವಣಿಗೆ ಆಗುತ್ತೆ ಗೊತ್ತಿಲ್ಲ. ಕಂದಾಯ ಇಲಾಖೆಯಲ್ಲಿನ ದಾಖಲಾತಿ ಹಾಗೂ ವಕ್ಫ್ ದಾಖಲಾತಿಯಲ್ಲಿ ಒಂದೇ ಇದ್ದರೆ ಮಾತ್ರ ಯಾವುದೇ ಗೊಂದಲ ಆಗುವುದಿಲ್ಲ. ಅಂತಿಮವಾಗಿ ಕಂದಾಯ ದಾಖಲಾತಿ ಮುಖ್ಯ. ಅದರಲ್ಲಿ ಏನಿದೆಯೋ ಅದರಂತೆ ದಾಖಲಾಗಲಿದೆ. ಸರ್ಕಾರ ಯಾವುದೇ ಕ್ರಮ ಕೈಗೊಳ್ಳುವ ಕೆಲಸ ಮಾಡಲ್ಲ ಎಂದು ಭರವಸೆ ನೀಡಿದರು.
ಪ್ರಧಾನಿ ಮೋದಿ ಅವರಿಗೆ ಸಿಎಂ ಸಿದ್ದರಾಮಯ್ಯ ರಾಜಕೀಯ ಪುಡಾರಿ ಎಂಬ ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು, ರಾಜಕೀಯ ಪುಡಾರಿ ಅಂದಿದ್ದು ಗೊತ್ತಿಲ್ಲ. ಪುಡಾರಿ ಅನ್ನೋದು ಸರಿನಾ? ತಪ್ಪಾ ಎಂದು ನನಗೆ ಗೊತ್ತಿಲ್ಲ. ನಮ್ಮನ್ನೂ ಪುಡಾರಿ ಅನ್ನುತ್ತಾರೆ. ಪುಡಾರಿ ಶಬ್ದ ಬಳಸುವುದು ಸರಿನಾ? ಎಂದು ಪ್ರಶ್ನಿಸಿದರು.
ಶಕ್ತಿ ಯೋಜನೆ ಪರಿಷ್ಕರಣೆ ಮಾಡುತ್ತೇವೆ ಎಂಬ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು, ಗ್ಯಾರಂಟಿ ಯೋಜನೆಗಳಲ್ಲಿ ಯಾವುದೇ ಗೊಂದಲ ಇಲ್ಲ, ಅನುಷ್ಠಾನ ಆಗುತ್ತಿದೆ. ಆ ಕುರಿತು ಏನೇ ಚರ್ಚೆ ಆದರೂ ಸಚಿವ ಸಂಪುಟಕ್ಕೆ ಬರಬೇಕು. ನಾವು ಈ ಬಗ್ಗೆ ಕ್ಯಾಬಿನೆಟ್ನಲ್ಲಿ ಯಾವುದೇ ಚರ್ಚೆ ಮಾಡಿಲ್ಲ. ಗ್ಯಾರಂಟಿ ಮುಂದುವರಿಸುತ್ತೇವೆ ಎಂದು ಪದೇಪದೆ ಹೇಳಿದ್ದಾರೆ. ಮಲ್ಲಿಕಾರ್ಜುನ್ ಖರ್ಗೆ ಅವರು ಡಿಕೆ ಶಿವಕುಮಾರ್ ಅವರ ಮಾತು ಉಲ್ಲೇಖಿಸಿ ಹೇಳಿದ್ದಾರೆ. ಅದಕ್ಕೆ ಪ್ರಧಾನಿ ಮೋದಿ ಅವರು ಪ್ರತಿಕ್ರಿಯಿಸಿದ್ದಾರೆ ಎಂದರು.