ದಾವಣಗೆರೆ:- ಜಿಲ್ಲೆಯ ವಿನೋಬನಗರದಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದೆ. ಇಲ್ಲಿ ಸುಮಾರು 10 ರಿಂದ 15 ನಾಯಿಗಳಿದ್ದು, ರಸ್ತೆಯಲ್ಲಿ ಬರುತ್ತಿದ್ದಂತೆ ಜನರ ಮೇಲೆ ಎರಗುತ್ತಿವೆ. ಕೆಲವರನ್ನು ಈಗಾಗಲೇ ಕಚ್ಚಿ ಗಾಯಗೊಳಿಸಿದ್ದು, ಮಕ್ಕಳನ್ನು ಮನೆಯಿಂದ ಹೊರಗೆ ಬಿಡಲು ಪೋಷಕರು ಹೆದರುತ್ತಿದ್ದಾರೆ.
ಹಿಂಡು ಹಿಂಡಾಗಿ ಬರುವ ನಾಯಿಗಳು ರಸ್ತೆಯಲ್ಲಿ ಹೋಗುವವರಿಗೆ ಕಚ್ಚಿ ಗಾಯಗೊಳಿಸುತ್ತಿವೆ. ಭಯದ ವಾತಾವರಣದಲ್ಲಿ ಜನರು ಕಾಲ ಕಳೆಯುವಂತಾಗಿದೆ. ಈಗಾಗಲೇ ಮಕ್ಕಳನ್ನು ಕಚ್ಚಿ ಗಾಯಗೊಳಿಸಿರುವ ನಾಯಿಗಳ ಕಾಟಕ್ಕೆ ಜನರು ಬೇಸತ್ತಿದ್ದಾರೆ. ಬೈಕ್ ಗಳ ಸೀಟ್ ಕವರ್ ಹಾಗೂ ಕಾರ್ ಗಳ ಕವರ್ ಗಳನ್ನು ಕಚ್ಚಿ ಹರಿದು ಹಾಕುತ್ತಿವೆ. ಆದಷ್ಟು ಬೇಗ ನಾಯಿಗಳನ್ನು ಹಿಡಿದು ಬೇರೆಡೆ ಸ್ಥಳಾಂತರ ಮಾಡುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.
ಶಾಲೆಗೆ ಹೋಗುವ ಮಕ್ಕಳು, ಕೆಲಸಕ್ಕೆ ಹೋಗುವ ಮಹಿಳೆಯರು, ಪುರುಷರೂ ಸಹ ರಸ್ತೆಯಲ್ಲಿ ನಾಯಿಗಳ ತೊಂದರೆಯಿಂದ ರಸ್ತೆಯಲ್ಲಿ ಹೋಗಲು ಭಯಪಡುತ್ತಿದ್ದಾರೆ. ಈ ಬಗ್ಗೆ ಸಂಬಂಧಪಟ್ಟವರು ಆದಷ್ಟು ಬೇಗ ಕ್ರಮ ತೆಗೆದುಕೊಳ್ಳಬೇಕು.
ಮಕ್ಕಳನ್ನು ನಾಯಿಗಳು ಬೆನ್ನತ್ತಿಕೊಂಡು ಹೋಗುತ್ತಿರುವುದು ಆತಂಕ ಮತ್ತಷ್ಟು ಹೆಚ್ಚಾಗಲು ಕಾರಣವಾಗಿದೆ. ಮಹಾನಗರ ಪಾಲಿಕೆಯ ಅಧಿಕಾರಿಗಳು ಸಬೂಬು ಹೇಳದೇ ಆದಷ್ಟು ಬೇಗ ನಾಯಿಗಳನ್ನು ಬೇರೆಡೆ ಸ್ಥಳಾಂತರ ಮಾಡಬೇಕು. ಮಹಾನಗರ ಪಾಲಿಕೆ ಕೂಡಲೇ ಈ ನಾಯಿಗಳನ್ನು ಸ್ಥಳಾಂತರ ಮಾಡಬೇಕು, ಮಾಡದಿದ್ದರೆ ಮತ್ತಷ್ಟು ಸಮಸ್ಯೆ ಹೆಚ್ಚಾಗಲಿದೆ. ಪರಿಸ್ಥಿತಿ ಗಂಭೀರಕ್ಕೆ ಹೋದ ಮೇಲೆ ಎಚ್ಚೆತ್ತುಕೊಳ್ಳುವುದಕ್ಕಿಂತ ಆದಷ್ಟು ಬೇಗ ಈ ಸಮಸ್ಯೆಯಿಂದ ಮುಕ್ತಿ ಕೊಡಿ ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.