ಚಿತ್ತಾಪುರ:- ವಿಷ ಸೇವಿಸಿ ಅಪ್ರಾಪ್ತ ಪ್ರೇಮಿಗಳಿಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ಚಿತ್ತಾಪುರ ತಾಲೂಕಿನ ಕೊಲ್ಲೂರ ಗ್ರಾಪಂ ವ್ಯಾಪ್ತಿಯಲ್ಲಿ ಜರುಗಿದೆ.
ರಾಂಪುರಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 8ನೇ ತರಗತಿ ವ್ಯಾಸಂಗ ಮಾಡುತ್ತಿದ್ದ ತರಕಸ್ಪೇಠ ಗ್ರಾಮದ ರಾಧಿಕಾ ಮೆತ್ತನ್(೧೪) ಹಾಗೂ ಯಾದಗಿರಿಯಲ್ಲಿ ಐಟಿಐ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ಕೊಲ್ಲೂರ ಗ್ರಾಮದ ನಿವಾಸಿ ಆಕಾಶ ಬೋವಿ(೧೯) ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂದ್ದಾರೆ.
ತರಕಸಪೇಠ್ ಸಮೀಪದ ಚೌಕಂಡಿ ತಾಂಡಾ ಪರಿಸರದ ನಿರ್ಜನ ಪ್ರದೇಶದಲ್ಲಿ ಸೇರಿದ್ದ ಈ ಪ್ರೇಮಿಗಳು ಏಕಕಾಲಕ್ಕೆ ಕೀಟನಾಶಕ ಸೇವಿಸಿದ್ದಾರೆ ಎನ್ನಲಾಗಿದ್ದು, ಸಾವು ಬದುಕಿನ ಮಧ್ಯೆ ಹೊರಾಡುತ್ತಿದ್ದ ಪ್ರೇಮಿಗಳನ್ನು ಗಮನಿಸಿದ ಸ್ಥಳೀಯರು ಖಾಸಗಿ ವಾಹನದಲ್ಲಿ ಕೊಲ್ಲೂರ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗೆ ಕಲಬುರಗಿ ಸರ್ಕಾರಿ ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಇಬ್ಬರು ಅಸುನೀಗಿದ್ದಾರೆ ಎಂದು ತಿಳಿದುಬಂದಿದೆ.