ಚಿತ್ರದುರ್ಗ: ಮಾಡಿದಷ್ಟು ನೀಡು ಭಿಕ್ಷೆ ಎಂಬ ತತ್ವ ಸಂದೇಶ ಸಾರಿ ಶ್ರೀಕ್ಷೇತ್ರ ನಾಯಕನಹಟ್ಟಿ ನೆಲಸಿದ ಕಾಯಕಯೋಗಿ ಶ್ರೀ ಗುರು ತಿಪ್ಪೇರುದ್ರಸ್ವಾಮಿ ರಥೋತ್ಸವ ವಿಜೃಂಭಣೆಯಿಂದ ಜರುಗಿತು. ಸುಡು ಬಿಸಿಲ ನಡುವೆಯೂ ಲಕ್ಷಾಂತರ ಭಕ್ತರು ವೈಭವದ ತಿಪ್ಪೇರುದ್ರಸ್ವಾಮಿ ರಥೋತ್ಸವಕ್ಕೆ ಸಾಕ್ಷೀಯಾಗಿ ಭಕ್ತಿ ಭಾವ ಸಮರ್ಪಿಸಿದರು.
ಇದರ ನಡುವೆ ಜಿಲ್ಲಾಡಳಿತ ನಾಯಕನಹಟ್ಟಿ ತಿಪ್ಪೇರುದ್ರ ಸ್ವಾಮಿಯ ಜಾತ್ರೆಯಲ್ಲಿ ಮೂಲಭೂತ ಸೌಕರ್ಯಗಳನ್ನು ಒದಗಿಸುವಲ್ಲಿ ವಿಫಲವಾಗಿದೆ, ಬಳ್ಳಾರಿ, ತುಮಕೂರು, ಬೆಂಗಳೂರು, ದಾವಣಗೆರೆ, ವಿಜಯನಗರ ಹೀಗೆ ಸುತ್ತಮುತ್ತ ಜಿಲ್ಲೆಗಳಿಂದ ಬಂದಂತ ಭಕ್ತಾದಿಗಳಿಗೆ ಕುಡಿಯಲು ನೀರಿನ ವ್ಯವಸ್ಥೆ ಇಲ್ಲ, ದೇವರ ದರ್ಶನ ಪಡೆಯಲು ಕೌಂಟರ್ಗಳ ವ್ಯವಸ್ಥೆ ಇಲ್ಲದೆ ಹಾಗೂ ದೇವಾಲಯದ ಸುತ್ತಮುತ್ತ ಸ್ವಚ್ಛತೆ ಮರಿಚಿಕೆಯಾಗಿದೆ ಎನ್ನುವುದು ಭಕ್ತಾದಿಗಳ ಆರೋಪವಾಗಿದೆ.
ಹೊರ ಜಿಲ್ಲೆಗಳಿಂದ ದೇವರು ದರ್ಶನ ಪಡೆಯಲು ಬರುತ್ತಿದ್ದೇವೆ ಆದರೆ ದೇವಸ್ಥಾನದ ಕಮಿಟಿ ಅಥವಾ ಜಿಲ್ಲಾಡಳಿತ ಸರಿಯಾದ ವ್ಯವಸ್ಥೆ ಮಾಡದೆ ಇರುವುದರಿಂದ ದೇವರ ದರ್ಶನವನ್ನ ಪಡೆಯದೆ ಊರಿಗೆ ಹಿಂತಿರುಗಿ ಹೋಗುವಂತಹ ಪರಿಸ್ಥಿತಿ ನಿರ್ಮಾಣಗೊಂಡಿದೆ ಎಂದು ಭಕ್ತನೊಬ್ಬನು ನೋವನ್ನು ತೋಡಿಕೊಂಡಿದ್ದಾನೆ.
ಜಿಲ್ಲಾಡಳಿತ ಜಾತ್ರಾ ಮಹೋತ್ಸವಕ್ಕೆ ಲಕ್ಷಾಂತರ ರೂಪಾಯಿ ಹಣವನ್ನು ಬಿಡುಗಡೆ ಮಾಡಿ ಮೂಲಸೌಕರ್ಯವನ್ನ ಒದಗಿಸಬೇಕೆಂದು ಆದೇಶ ಹೊರಡಿಸಿದ್ದರು ಸಹ ಅಧಿಕಾರಿಗಳು ಮೂಲಭೂತ ಸೌಕರ್ಯ ಒದಗಿಸುವಲ್ಲಿ ವಿಫಲರಾಗಿದ್ದಾರೆ.