ಅಮೆರಿಕಾದ ನೂತನ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಬೆನ್ನಲ್ಲೇ ಡೊನಾಲ್ಡ್ ಟ್ರಂಪ್ ವಿಶ್ವಸಂಸ್ಥೆಯ ಆರೋಗ್ಯ ಸಂಸ್ಥೆಯಿಂದ ಹಿಂದೆ ಸರಿಯುವುದಾಗಿ ಘೋಷಿಸಿದ್ದಾರೆ. ಈ ಬೆನ್ನಲ್ಲೇ ವಿಶ್ವರ ಆರೋಗ್ಯ ಸಂಸ್ಥೆಗೆ ಚೀನಾವು ತನ್ನ ಬೆಂಬಲವನ್ನು ಪ್ರಕಟಿಸಿದೆ.
ಅಮೆರಿಕದ ಅಧ್ಯಕ್ಷರಾಗಿ ಟ್ರಂಪ್ ಸೋಮವಾರ ಪ್ರಮಾಣವಚನ ಸ್ವೀಕರಿಸಿದ ಕೂಡಲೇ, ಅಮೆರಿಕವು ಡಬ್ಲ್ಯುಎಚ್ಒನಿಂದ ಹೊರಬರುವ ಕಾರ್ಯಕಾರಿ ಆದೇಶಕ್ಕೆ ಸಹಿ ಹಾಕಿದರು. ಇದು ಐದು ವರ್ಷಗಳ ಅಂತರದಲ್ಲಿ ಅಮೆರಿಕವು ಎರಡನೇ ಬಾರಿಗೆ ಡಬ್ಲ್ಯೂಎಚ್ಒದಿಂದ ಹಿಂದೆ ಸರಿದಂತಾಗಿದೆ.
ಟ್ರಂಪ್ ಅವರ ಈ ನಿರ್ಧಾರ ಹೊರಬಿದ್ದ ಬಳಿಕ, ಚೀನಾವು ತನ್ನ ಬೆಂಬಲವನ್ನು ದೃಢಪಡಿಸಿದೆ. ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ಗುವೊ ಜಿಯಾಕುನ್ ಮಾತನಾಡಿ, ವಿಶ್ವ ಆರೋಗ್ಯ ಸಂಸ್ಥೆಗೆ ತಮ್ಮ ಬೆಂಬಲವನ್ನು ಮುಂದುವರಿಸಲಾಗುವುದು ಎಂದು ಹೇಳಿದರು. ಜಾಗತಿಕ ಸಾರ್ವಜನಿಕ ಆರೋಗ್ಯ ಕ್ಷೇತ್ರದಲ್ಲಿ ಡಬ್ಲ್ಯೂಎಚ್ಒ ಅಧಿಕೃತ ಅಂತಾರಾಷ್ಟ್ರೀಯ ಸಂಸ್ಥೆಯಾಗಿದೆ. ಅದರ ಪ್ರಾಮುಖ್ಯತೆಯನ್ನು ಹೆಚ್ಚಿಸಬೇಕೇ ಹೊರತು, ಅದನ್ನು ದುರ್ಬಲಗೊಳಿಸಬಾರದು ಎಂದು ಗುವೊ ಹೇಳಿದ್ದಾರೆ.
ಕೋವಿಡ್ -19 ಸಾಂಕ್ರಾಮಿಕ ಸೇರಿ ಇತರ ಅಂತಾರಾಷ್ಟ್ರೀಯ ಆರೋಗ್ಯ ಬಿಕ್ಕಟ್ಟುಗಳ ನಿರ್ವಹಣೆಯಲ್ಲಿ ಡಬ್ಲ್ಯೂಎಚ್ಒ ವಿಫಲವಾಗಿದೆ. ಈ ಕಾರಣಕ್ಕಾಗಿ ಅಮೆರಿಕವು ವಿಶ್ವ ಆರೋಗ್ಯ ಸಂಸ್ಥೆಯಿಂದ ಅಧಿಕೃತವಾಗಿ ನಿರ್ಗಮಿಸುತ್ತದೆ ಎಂದು ಟ್ರಂಪ್ ಹೇಳಿದ್ದರು.