ಏಷ್ಯಾದ ಅತಿ ದೊಡ್ಡ ತಂತ್ರಜ್ಞಾನ ಶೃಂಗ ಎನಿಸಿರುವ ‘ಬೆಂಗಳೂರು ಟೆಕ್ ಶೃಂಗ 2024’ಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚಾಲನೆ ನೀಡಿದರು. ಟೆಕ್ ಅನ್ ಬೌಂಡ್ ಥೀಮ್ ನಡಿ ಅಯೋಜಿಸಲಾಗಿರುವ ಬೆಂಗಳೂರು ಟೆಕ್ ಶೃಂಗಸಭೆ 2024ಯನ್ನು ಮುಖ್ಯಮಂತ್ರಿಗಳು ಉದ್ಘಾಟಸಿದರು,
ಕರ್ನಾಟಕ ಸರ್ಕಾರದ ಎಲೆಕ್ಟ್ರಾನಿಕ್ಸ್, ಐಟಿ, ಬಿಟಿ ಇಲಾಖೆ ಮತ್ತು ಭಾರತ ಸಾಫ್ಟ್ವೇರ್ ಟೆಕ್ನಾಲಜಿ ಪಾರ್ಕ್ ಸಂಯುಕ್ತಾಶ್ರಯದಲ್ಲಿ ಬೆಂಗಳೂರಿನ ಅರಮನೆ ಮೈದಾನದಲ್ಲಿ ‘ಬೆಂಗಳೂರು ಟೆಕ್ ಶೃಂಗಸಭೆ 2024ರ 27ನೇ ಆವೃತ್ತಿಯನ್ನು ಆಯೋಜಿಸಲಾಗಿದೆ.
ಬೆಂಗಳೂರು ಟೆಕ್ ಶೃಂಗ 2024’ಕ್ಕೆ ಚಾಲನೆ ನೀಡಿ ಮಾತನಾಡಿದ ಸಿಎಂ, ಐ. ಟಿ, ಡೀಪ್ ಟೆಕ್, ಬಯೋ ಟೆಕ್ನಾಲಜಿ ಮತ್ತು ಜೀವ ವಿಜ್ಞಾನ ಕ್ಷೇತ್ರಗಳಲ್ಲಿ ಪ್ರಗತಿಯನ್ನು ರಾಜ್ಯದ ವ್ಯಾಪಕ ಪ್ರತಿಭೆ, ಪ್ರವರ್ಧಮಾನಕ್ಕೆ ಬರುತ್ತಿರುವ ಸ್ಟಾರ್ಟ್ ಅಪ್ ಪರಿಸರ ಮತ್ತು ಸದೃಢವಾದ ಮೂಲಸೌಕರ್ಯ ವ್ಯವಸ್ಥೆ ಉತ್ತೇಜಿಸಿದೆ. ಈ ಹೆಮ್ಮೆಯ ಪರಂಪರೆಯನ್ನು ಆಧರಿಸಿ ನಾವೀನ್ಯತೆ, ಸುಸ್ಥಿರತೆ ಮತ್ತು ಒಳಗೊಂಡ ಬೆಳವಣಿಗೆಗೆ ನಮ್ಮ ಬದ್ಧತೆ ಆಚಲವಾಗಿದೆ.
ಭಾರತದ ಮೊದಲ ಗ್ಲೋಬಲ್ ಕೆಪೆಬಿಲಿಟಿ ಸೆಂಟರ್ ನೀತಿಯನ್ನು ಕರ್ನಾಟಕ ಜಾರಿಗೆ ತಂದಿದ್ದು, ಈ ಕೇಂದ್ರಗಳನ್ನು ಸಶಕ್ತಹೋಲಿಸಲು ಹಾಗೂ ಬೆಂಬಲಿಸಲು ಉದ್ದೇಶಿಸಿದೆ. ಇದರ ಮುಂದುವರೆದ ಭಾಗವಾಗಿ ಬೆಂಗಳೂರು, ಮೈಸೂರು ಹಾಗೂ ಬೆಳಗಾವಿಯಲ್ಲಿ ಮೂರು ಜಾಗತಿಕ ನಾವೀನ್ಯತಾ ಜಿಲ್ಲೆಗಳನ್ನು ಸ್ಥಾಪಿಸಲಾಗುವುದು ಎಂದು ಘೋಷಿಸಲು ನನಗೆ ಹೆಮ್ಮೆ ಎನಿಸಿದೆ. ರಾಜ್ಯದಲ್ಲಿ ಜಿಸಿಸಿಗಳನ್ನು ಸ್ಥಾಪಿಸಲು ಈ ಪಾರ್ಕ್ ಗಳು ಮೀಸಲಾಗಿರುತ್ತದೆ. ಬೆಂಗಳೂರು ಜಾಗತಿಕ ನಾವೀನ್ಯತಾ ಜಿಲ್ಲೆಯು ಜ್ಞಾನ, ಆರೋಗ್ಯ ಮತ್ತು ನಾವೀನ್ಯತೆಯ ನಗರದ ಭಾಗವಾಗಿರಲಿದೆ(ಕ್ವಿನ್ ಸಿಟಿ). ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಕೇವಲ 45 ನಿಮಿಷಗಳ ಅಂತರದಲ್ಲಿದ್ದು, ನಾವೀನ್ಯತೆ ಮತ್ತು ಸಂಶೋಧನೆಗೆ ಜಾಗತಿಕ ಕೇಂದ್ರವಾಗಿ ಪರಿಣಮಿಸಲಿದೆ.
ಇಂಜಿನಿಯರಿಂಗ್ ಪ್ರತಿಭೆ ಮತ್ತು ಜಾಗತಿಕವಾಗಿ ಅತ್ಯಧಿಕ ಎ.ಐ ವೃತ್ತಿಪರರನ್ನು ಹೊಂದಿರುವ ಕರ್ನಾಟಕ ಜಿಸಿಸಿಗಳಿಗೆ ಅತಿ ಪ್ರಿಯವಾದ ಗಮ್ಯವಾಗಿದೆ. ಎನ್ ಐ ಪಿ ಯು ಎನ್ ಎ ಕರ್ನಾಟಕದಡಿಯಲ್ಲಿ ಕೈಗಾರಿಕೆಗಳಲ್ಲಿ ಕಾರ್ಯನಿರ್ವಹಿಸಲು ಸಿದ್ದರಿರುವ ಕಾರ್ಮಿಕಪಡೆಯನ್ನು ತಯಾರು ಮಾಡಲು ನಾವು ಕೈಗೊಂಡ ಯೋಜನೆಗಳು ಇನ್ನಷ್ಟು ಬಲಪಡಿಸಲಿವೆ. ಈಗ ತಾನೇ ಮೈಕ್ರೋ ಸಾಫ್ಟ್, ಇಂಟೆಲ್, ಆಕ್ಸೆಂಚರ್, ಐ.ಬಿ.ಎಂ ಮತ್ತು ಬಿ ಎಫ್ ಎಸ್ ಕಾಂಸಾರ್ಟಿಯಂ ಜೊತೆಗೆ ಸಹಿ ಹಾಕಲಾದ ಐದು ಒಪ್ಪಂದಗಳು ಕರ್ನಾಟಕದ ಒಂದು ಲಕ್ಷ ವ್ಯಕ್ತಿಗಳನ್ನು ಕೌಶಲಯುಕ್ತಗೊಳಿಸಲಿದೆ. ಮಂಗಳೂರಿನ ಫಿನ್ ಟೆಕ್ ಲೀಡರ್ ಶಿಪ್ ನಿಂದ ಹುಬ್ಬಳ್ಳಿ ಧಾರವಾಡದ ಇವಿ ಪ್ರಗತಿ ಮತ್ತು ಡ್ರೋನ್ ಗಳು ಹಾಗೂ ಮೈಸೂರು ಪಿಸಿಬಿ ಕ್ಲಸ್ಟರ್ ಆಗುವವರೆಗೆ ಕ್ಲಸ್ಟರ್ ಆಧಾರಿತ ಅನುಸಂಧಾನದ ಮೂಲಕ ಸಮತೋಲಿತ ಪ್ರಾದೇಶಿಕ ಬೆಳವಣಿಗೆಯನ್ನು ಸಾಧಿಸಲಾಗುತ್ತಿದೆ ಎಂದು ತಿಳಿಸಿದರು.
ಬೆಂಗಳೂರಿನ ಮೇಲೆ ನಮ್ಮ ಗಮನವನ್ನು ಕೇಂದ್ರೀಕರಿಸುತ್ತಲೇ, ಪ್ರಾದೇಶಿಕ ಬಲವನ್ನು ಸಜ್ಜುಗೊಳಿಸಲು ಹಾಗೂ ಹೂಡಿಕೆಗಳನ್ನು ಆಕರ್ಷಿಸಲು ಸೂಕ್ತ ನೀತಿ ಮತ್ತು ಮೂಲ ಸೌಕರ್ಯಗಳನ್ನು ಸೃಜಿಸಲಾಗುತ್ತಿದೆ. ಟೆಕ್ ಆಧಾರಿತ ವಲಯಗಳನ್ನು ಉತ್ತೇಜಿಸಲು ಭೌತಿಕ ಮತ್ತು ಡಿಜಿಟಲ್ ಮೂಲಸೌಕರ್ಯದ ಮೇಲೆ ನಮ್ಮ ಸರ್ಕಾರವು ಗಮನಾರ್ಹ ಹೂಡಿಕೆಗಳನ್ನು ಮಾಡಿದೆ.ಗ್ರಾಮೀಣ ಸಂಪರ್ಕಕ್ಕಾಗಿ ‘ನಮ್ಮ ಗ್ರಾಮ ನಮ್ಮ ಯೋಜನೆ’ ಮತ್ತು ವಿಶೇಷ ಅಭಿವೃದ್ಧಿ ಯೋಜನೆಗಳು ಸಂಪರ್ಕ ಮತ್ತು ಆರ್ಥಿಕ ಅವಕಾಶಗಳನ್ನು ಕರ್ನಾಟಕದಾದ್ಯಂತ ವೃದ್ಧಿಸಿದೆ ಎಂದರು.