ಸಿನಿಮಾದಲ್ಲಿ ನಾಯಕಿಯಾಗಿ ನಟಿಸಲು ಅವಕಾಶ ಕೊಡಿಸುವುದಾಗಿ ಹೇಳಿ ಮೋಸ ಮಾಡಿರುವ ಆರೋಪದಡಿ ಸ್ಯಾಂಡಲ್ವುಡ್ ಸಹ ನಟನ ವಿರುದ್ಧ ದೂರು ದಾಖಲಾಗಿದೆ. ಯುವತಿ ನೀಡಿದ ಮಾಹಿತಿ ಆಧರಿಸಿ ಸಂತೋಷ್ ಎಂಬಾತನ ವಿರುದ್ಧ ಜ್ಞಾನಭಾರತಿ ರಾಣೆ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಆರೋಪಿ ಸಂತೋಷ್ ಕೆಲವು ಕನ್ನಡ ಹಾಗೂ ತಮಿಳು ಚಿತ್ರಗಳಲ್ಲಿ ಸಣ್ಣಪುಟ್ಟ ಪಾತ್ರಗಳಲ್ಲಿ ನಟಿಸಿದ್ದಾನೆ. ತನಗೆ ಸಿನಿಮಾ ಚಾನ್ಸ್ ಕೊಡಿಸುವುದಾಗಿ ಹೇಳಿ ಪ್ರೀತಿಯ ನಾಟಕವಾಡಿ ವಂಚಿಸಿರುವುದಾಗಿ ಯುವತಿ ದೂರಿನಲ್ಲಿ ಉಲ್ಲೇಖಿಸಿದ್ದಾಳೆ.
ರಾಯಚೂರು ಮೂಲದ ಯುವತಿ ಕುಟುಂಬಸ್ಥರ ಜೊತೆ ಬೆಂಗಳೂರಿನಲ್ಲಿ ವಾಸಿಸುತ್ತಿದ್ದು ಕಳೆದ 5 ವರ್ಷಗಳ ಹಿಂದೆ ಯುವತಿಗೆ ಆರೋಪಿಯ ಪರಿಚಯವಾಗಿದೆ. ತಾನು ಸಿನಿಮಾ ನಟ ಎಂದು ತನ್ನನ್ನು ಆತ ಪರಿಚಯಿಕೊಂಡಿದ್ದ. ಬಳಿಕ ಪ್ರೀತಿಯ ನಾಟಕ ಶುರು ಮಾಡಿದ್ದಾನೆ.
ನೀನು ನೋಡಲು ಚೆನ್ನಾಗಿದ್ದೀಯಾ, ಸಿನಿಮಾ ಹೀರೊಯಿನ್ ಆಗಬಹುದು. ನಿನಗೆ ಹೀರೊಯಿನ್ ಚಾನ್ಸ್ ಕೊಡಿಸುತ್ತೇನೆ ಎಂದು ಮರಳು ಮಾತುಗಳನ್ನು ಆಡಿದ್ದಾನೆ. ಯುವತಿ ಆತನ ಮಾತುಗಳನ್ನು ನಂಬಿದ್ದಳು. ಬಳಿಕ ಆತ ಯುವತಿಯನ್ನು ಮೈಸೂರು, ಗೋವಾಗೆ ಕರೆದೊಯ್ದು ಲೈಂಗಿಕವಾಗಿ ಬಳಸಿಕೊಂಡಿದ್ದಾನೆ. ಅಷ್ಟಕ್ಕೇ ಸುಮ್ಮನಾಗದೇ ತಮ್ಮಿಬ್ಬರ ಖಾಸಗಿ ಕ್ಷಣಗಳನ್ನು ಫೋನ್ನಲ್ಲಿ ಸೆರೆಹಿಡಿದುಕೊಂಡಿದ್ದಾನೆ.
ಬಳಿಕ ತನ್ನನ್ನು ಬೆದರಿಸಿ ಚಿನ್ನಾಭರಣ, ನಗದು ಕಸಿದುಕೊಂಡಿರುವುದಾಗಿ ಆರೋಪಿಸಿ ದೂರು ನೀಡಿದ್ದಾಳೆ. ತನಗೆ ಆತ ವಂಚನೆ ಮಾಡಿರುವುದು ಗೊತ್ತಾಗುತ್ತಿದ್ದಂತೆ ಯುವತಿ ಪ್ರಶ್ನಿಸಲು ಹೋದಾಗ ಆಕೆಯ ಮೇಲೆ ಆತ ಹಲ್ಲೆ ಸಹ ಮಾಡಿದ್ದಾನೆ. ಆರೋಪಿ ಅತ್ತಿಬೆಲೆ ಸಮೀಪ ವಾಸವಾಗಿದ್ದ ಸಮಯದಲ್ಲಿ ಯುವ ಮಾಹಿತಿ ಪಡೆದು ಹೋಗಿ ಪ್ರಶ್ನಿಸಿದ್ದಳು. ಆಗ ಆಕೆ ಮೇಲೆ ಹಲ್ಲೆ ಮಾಡಿದ್ದಾನೆ. ಅಷ್ಟಕ್ಕೆ ಸುಮ್ಮನಾಗದೇ ಸಂತೋಷ್ ಯುವತಿ ಮನೆ ಬಳಿ ಹೋಗಿ “ನಾನು ಕರೆದಾಗ ನೀನು ಬರಬೇಕು, ಇಲ್ಲದಿದ್ದರೆ ನಿನ್ನೊಟ್ಟಿನ ಖಾಸಗಿ ಫೋಟೊ, ವಿಡಿಯೋಗಳನ್ನ ವೈರಲ್ ಮಾಡುತ್ತೇನೆ, ನಿನ್ನ ತಂದೆ ತಾಯಿಗೂ ತೋರಿಸುತ್ತೇನೆ’ ಎಂದು ಬೆದಿರಿಸಿದ್ದಾನೆ. ಮತ್ತೊಮ್ಮೆ ತನ್ನ ಮೇಲೆ ಹಲ್ಲೆ ಮಾಡಿದ್ದಾನೆ ಎಂದು ದೂರುದಾರೆ ತಿಳಿಸಿದ್ದಾಳೆ.
ಸಂತ್ರಸ್ತ ಯುವತಿ 6 ತಿಂಗಳ ಹಿಂದೆಯೂ ಆತನ ವಿರುದ್ಧ ದೂರು ನೀಡಿದ್ದಳು. ಆದರೆ ಕೃತ್ಯ ನಡೆದ ಸ್ಥಳದ ಆಧಾರದಲ್ಲಿ ಅತ್ತಿಬೆಲೆ ಠಾಣೆಗೆ ಪ್ರಕರಣ ವರ್ಗಾವಣೆ ಆಗಿತ್ತು. ಆತನ ವಿರುದ್ಧ ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಆರೋಪಿಯು ಮತ್ತೆ ಯುವತಿಯ ಹಲ್ಲೆ ಮಾಡಿರುವ ಕಾರಣ ಯುವತಿ ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ.
ಆರೋಪಿ ಸಂತೋಷ್ ಈ ಹಿಂದೆ ಕೂಡ ಮತ್ತೊಬ್ಬ ಯುವತಿಯೊಂದಿಗೆ ಇದೇ ರೀತಿ ಪ್ರೀತಿ, ಮದುವೆ ನಾಟಕ ಮಾಡಿ ವಂಚಿಸಿರುವ ಆರೋಪ ಕೇಳಿಬಂದಿದ್ದು ಪೊಲೀಸರು ಎಫ್ ಐ ಆರ್ ದಾಖಲಿಸಿಕೊಂಡು ವಿಚಾರಣೆ ನಡೆಸುತ್ತಿದ್ದಾರೆ.