ನವದೆಹಲಿ: ಹರ್ಯಾಣದಲ್ಲಿ ಬಿಜೆಪಿ ಮುನ್ನಡೆಗೆ ಆಪ್ ಕಾರಣಾವಾಯ್ತಾ ಎಂಬ ವಿಶ್ಲೇಷಣೆ ಈಗ ಆರಂಭವಾಗಿದೆ. ಹೌದು. ಹಲವು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಮತಗಳು ಆಪ್ ಬಿದ್ದ ಕಾರಣ ಬಿಜೆಪಿ ಅಭ್ಯರ್ಥಿಗಳು ಮುನ್ನಡೆ ಸಾಧಿಸಿದ್ದಾರೆ ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ.
ಮಧ್ಯಾಹ್ನ 12 ಗಂಟೆ ಟ್ರೆಂಡ್ ಪ್ರಕಾರ ಚುನಾವಣಾ ಆಯೋಗದ ವೆಬ್ಸೈಟ್ನಲ್ಲಿ ಬಿಜೆಪಿ 49, ಕಾಂಗ್ರೆಸ್ 35 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿವೆ. ಬಿಜೆಪಿ 39.07%, ಕಾಂಗ್ರೆಸ್ 40.26% ಮತ ಪಡೆದಿದೆ. ಐಎನ್ಎಲ್ಡಿ 4.09%, ಆಪ್ 1.64%, ಬಿಎಸ್ಪಿ 1.66% ಮತ ಪಡೆದಿದೆ.
ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಹರ್ಯಾಣದಲ್ಲಿ ಕಾಂಗ್ರೆಸ್ಮತ್ತು ಆಪ್ ಮೈತ್ರಿ ಮಾಡಿಕೊಂಡಿತ್ತು. ಪರಿಣಾಮ ಒಟ್ಟು 10 ಸ್ಥಾನಗಳ ಪೈಕಿ INDIA ಒಕ್ಕೂಟ 5 ಸ್ಥಾನಗಳನ್ನು ಗೆದ್ದರೆ ಬಿಜೆಪಿ 5 ಸ್ಥಾನಗಳನ್ನು ಗೆದ್ದುಕೊಂಡಿತ್ತು. 2019ರ ಚುನಾವಣೆಯಲ್ಲಿ ಬಿಜೆಪಿ ಎಲ್ಲಾ 10 ಸ್ಥಾನಗಳನ್ನು ಗೆದ್ದುಕೊಂಡಿತ್ತು.
ಲೋಕಸಭಾ ಚುನಾವಣೆಯಲ್ಲಿ ಉತ್ತಮ ಪ್ರದರ್ಶನ ನೀಡಿದ ಹಿನ್ನೆಲೆಯಲ್ಲಿ ವಿಧಾನಸಭಾ ಚುನಾವಣೆಯಲ್ಲೂ ಕಾಂಗ್ರೆಸ್ ಮತ್ತು ಆಪ್ ಮೈತ್ರಿ ಮಾತುಕತೆ ನಡೆದಿತ್ತು. ಮಾತುಕತೆಯ ವೇಳೆ ಆಪ್ 10 ಕ್ಷೇತ್ರಗಳನ್ನು ಕೇಳಿದ್ದರೆ ಕಾಂಗ್ರೆಸ್ 3 ಕ್ಷೇತ್ರಗಳನ್ನು ಮಾತ್ರ ನೀಡುವುದಾಗಿ ಹೇಳಿದ್ದ ವಿಚಾರ ಮೂಲಗಳಿಂದ ತಿಳಿದು ಬಂದಿತ್ತು.