ಬೆಂಗಳೂರು:- ಬಿಜೆಪಿ ಟಿಕೆಟ್ ಹೆಸರಲ್ಲಿ 5 ಕೋಟಿ ರೂ. ವಂಚನೆ ಕುರಿತು ಚೈತ್ರಾ ಕುಂದಾಪುರ ಹಾಗೂ ಇತರ ಆರೋಪಿಗಳು ತಪ್ಪೊಪ್ಪಿಗೆ ಹೇಳಿಕೆ ನೀಡಿದ್ದು, ಅದರ ಪ್ರತಿ ಲಭ್ಯವಾಗಿದೆ.
ಚಿಕ್ಕಮಗಳೂರು ಮೂಲದ ಆರ್ಎಸ್ಎಸ್ ಪ್ರಚಾರಕ ವಿಶ್ವನಾಥ್ ಜೀ ಎಂಬ ಪಾತ್ರ ಸೃಷ್ಟಿಸಿದ್ದು, ಇದಕ್ಕೆ ತಕ್ಕಂತೆ ಸಂಭಾಷಣೆಯ ಸ್ಕ್ರೀಪ್ಟ್ ಸಿದ್ಧಪಡಿಸಲಾಗಿತ್ತು. ಈ ಪಾತ್ರವನ್ನು ಆರೋಪಿ ರಮೇಶ್ಗೆ ವಹಿಸಿ ತರಬೇತಿ ಕೂಡ ನೀಡಲಾಗಿತ್ತು.
ಗೋವಿಂದ ಪೂಜಾರಿಗೆ ಮತ್ತು ಪ್ರಸಾದ್ ಬೈಂದೂರಿಗೆ, ಆರೋಪಿ ಗಗನ್ ಕಡೂರ್ ವಿಶ್ವನಾಥ್ ಜೀ (ರಮೇಶ್) ಯನ್ನು ಪರಿಚಯಿಸಿದ್ದ. ಆಗ ಗೋವಿಂದ ಬಾಬು, ನಾನು ಬೈಂದೂರು ವಿಧಾನಸಭಾ ಕ್ಷೇತ್ರದಲ್ಲಿ ಹಲವು ಸಮಾಜ ಸೇವೆ ಮಾಡುತ್ತಿದ್ದು, ಈ ಬಾರಿ ಬೈಂದೂರು ವಿಧಾನಸಭಾ ಕ್ಷೇತ್ರಕ್ಕೆ ಹೇಗಾದರೂ ಮಾಡಿ ಬಿಜೆಪಿ ಟಿಕೆಟ್ ಕೊಡಿಸಿ ಎಂದು ಕೇಳಿಕೊಂಡಿದ್ದರು. ಬಳಿಕ ತಮ್ಮ ಪ್ರೋಫೈಲ್ ಅನ್ನು ವಿಶ್ವನಾಥ್ಗೆ ನೀಡಿದ್ದರು.
ಗೋವಿಂದ ಬಾಬು ಬುಟ್ಟಿಗೆ ಬೀಳುತ್ತಿರುವುದನ್ನು ಖಚಿತಪಡಿಸಿಕೊಂಡ ವಿಶ್ವನಾಥ್, ಸಾಕಷ್ಟು ಹಣ ನೀಡಿದರೆ ನಿಮಗೆ ಟಿಕೆಟ್ ಸಿಗಬಹದು. ಟಿಕೆಟ್ ಪ್ರಕ್ರಿಯೆ ಆರಂಭಿಸಬೇಕಾದರೆ ಮೂರು ದಿನಗಳಲ್ಲಿ ಗಗನ್ ಕಡೂರು ಬಳಿ 50 ಲಕ್ಷ ರೂ. ನೀಡಬೇಕು ಎಂದು ಹೇಳಿದ್ದ. ಅದಕ್ಕೆ ಗೋವಿಂದ ಬಾಬು ಒಪ್ಪಿಕೊಂಡು ಅಲ್ಲಿಂದ ಹೊರಟು ಹೋದರು. ಅದರಂತೆ 2022 ಜು.6ರಂದು ಪ್ರಸಾದ್ ಬೈಂದೂರು, ಗಗನ್ ಕಡೂರ್ಗೆ
ಫೋನ್ ಮಾಡಿ 50 ಲಕ್ಷ ರೂ. ತೆಗೆದುಕೊಂಡು ಶಿವಮೊಗ್ಗಕ್ಕೆ ಬರುವುದಾಗಿ ತಿಳಿಸಿದ್ದ. ಜು.7 ರಂದು 50 ಲಕ್ಷ ರೂ. ಹಣವಿದ್ದ ಬ್ಯಾಗ್ ಅನ್ನು ಚೈತ್ರಾ ಮತ್ತು ಗಗನ್ ಕಡೂರ್ಗೆ ನೀಡಲಾಗಿತ್ತು. ಹೀಗೆ ಹಂತ ಹಂತವಾಗಿ ಹಣ ಪಡೆಯಲಾಗಿದೆ.
ನಂತರ ಗೋವಿಂದ ಬಾಬುಗೆ ಕರೆ ಮಾಡಿದ ವಿಶ್ವನಾಥ್, ನಿಮಗೆ ಟಿಕೆಟ್ ಅಂತಿಮಗೊಂಡಿದ್ದು, ಕರ್ನಾಟಕ ಟಿಕೇಟ್ ಹಂಚಿಕೆಗೆ ಹೋಸಪೇಟೆಯ ಸಂಸ್ಥಾನ ಮಠ ಹಿರೇಹಡಗಲಿಯ ಅಭಿನವ ಹಾಲಶ್ರೀ ಶಿಫಾರಸು ಕೂಡ ಮುಖ್ಯ ವಾಗಿರುತ್ತದೆ. ನೀವು ಅವರನ್ನು ಭೇಟಿ ಮಾಡಬೇಕು. ನಾನು 10 ದಿನ ಆರ್ಎಸ್ಎಸ್ ಕಾರ್ಯಕ್ರಮದಲ್ಲಿ ಪಾಲ್ಗೊಳಲು ಕಾಶ್ಮೀರಕ್ಕೆ ತೆರಳುತ್ತಿದ್ದೇನೆ ಎಂದು ತಿಳಿಸಿದ್ದ.
ಚೈತ್ರಾ ಕುಂದಾಪುರ, ಗಗನ್ ಕಡೂರ್ಗೆ ಫೋನ್ ಮಾಡಿ, ಅನಾರೋಗ್ಯದ ಕಾರಣ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದ ವಿಶ್ವನಾಥ್ ಜೀ ಉಸಿರಾಟದ ಸಮಸ್ಯೆಯಿಂದ ಮೃತಪಟ್ಟಿದ್ದಾರೆ ಎಂದು ತಿಳಿಸಿದ್ದರು. ಗಗನ್ ಕಡೂರು ಈ ವಿಷಯವನ್ನು ಪೂಜಾರಿಗೆ ಹೇಳಿದ್ದ. ಆಗ ಪೂಜಾರಿ ವಿಶ್ವನಾಥ್ ಜೀಗೆ ಅಂತಿಮ ನಮನ ಸಲ್ಲಿಸಲು ಕಾಶ್ಮೀರಕ್ಕೆ ಹೋಗುತ್ತೇನೆ ಎಂದು ಹೇಳಿದ್ದು, ಅದಕ್ಕೆ ಗಗನ್ ಕಡೂರು ಸೂರ್ಯಾಸ್ತದ ಮೊದಲು ಶ್ರೀನಗರದ ಆರ್ಎಸ್ಎಸ್ ಕಚೇರಿ ಬಳಿ ಅಂತ್ಯಸಂಸ್ಕಾರ ಮಾಡಲಾಗುವುದು, ಅಷ್ಟರೊಳಗೆ ಅಲ್ಲಿಗೆ ತಲುಪಲು ಸಾಧ್ಯವಿಲ್ಲ ಎಂದು ಹೇಳಿ ಸಮಾಧಾನ ಪಡಿಸಿದ್ದ.
ಈ ಎಲ್ಲ ಬೆಳವಣಿಗೆಗಳಿಂದ ಅನುಮಾನಗೊಂಡ ಪೂಜಾರಿ, ತಮ್ಮ ನೆಟ್ವರ್ಕ್ ಮೂಲಕ ವಿಶ್ವನಾಥ್ಜೀ ಎಂಬುವವರ ಬಗ್ಗೆ ಮಾಹಿತಿ ಕಲೆ ಹಾಕಿದ್ದಾಗ ಆ ರೀತಿಯ ಹೆಸರಿನ ವ್ಯಕ್ತಿ ಆರ್ಎಸ್ಎಸ್ನಲ್ಲಿ ಇಲ್ಲ ಎಂದು ಖಚಿತ ಪಡಿಸಿಕೊಂಡಿದ್ದರು. ಬಳಿಕ ಆರೋಪಿಗಳಿಗೆ ನಿಮ್ಮ ನಾಟಕ ಎಲ್ಲ ನನಗೆ ಗೊತ್ತಾಗಿದೆ ನನ್ನ ಹಣ ವಾಪಸ್ ಕೊಡಿ ಎಂದು ಹೇಳಿದ್ದರು. ಬೊಮ್ಮನಹಳ್ಳಿಯ ಗೋವಿಂದ ಬಾಬು ಪೂಜಾರಿ ಕಚೇರಿಗೆ ಆಗಮಿಸಿದ್ದ ಆರೋಪಿಗಳು ಅಲ್ಲಿಯೂ ಆತ್ಮಹತ್ಯೆಯ ನಾಟಕವಾಡಿದ್ದರು. ಇದಕ್ಕೆ ಸೊಪುಪ ಹಾಕದ ಗೋವಿಂದ ಬಾಬು, ಈ ಸಂಬಂಧ ಬಂಡೇಪಾಳ್ಯ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ನಂತರ ಪ್ರಕರಣ ಸಿಸಿಬಿಗೆ ವರ್ಗಾವಣೆಯಾಗಿ ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸಿ ನ್ಯಾಯಾಲಯಕ್ಕೆ 800 ಪುಟಗಳ ಚಾರ್ಜ್ ಶೀಟ್ ಸಲ್ಲಿಸಿದ್ದಾರೆ.