‘ಬಿಗ್ ಬಾಸ್ ಕನ್ನಡ ಸೀಸನ್ 11’ ಆರಂಭದಿಂದಲೂ ಒಂದಲ್ಲ ಒಂದು ಕಾರಣಕ್ಕೆ ಸದ್ದು ಮಾಡುತ್ತಲೆ ಇದೆ. ದಿನದಿಂದ ದಿನಕ್ಕೆ ಶೋನ ರೋಚಕತೆ ಹೆಚ್ಚುತ್ತಿದೆ. ಇದೀಗ ಚೈತ್ರಾ ಕುಂದಾಪುರ ವಿರುದ್ಧ ಶಿಶಿರ್ ತಿರುಗಿ ಬಿದ್ದಿದ್ದಾರೆ. ಇಷ್ಟು ದಿನಗಳ ಕಾಲ ಶಿಶಿರ್ ಮತ್ತು ಚೈತ್ರಾ ನಡುವೆ ಉತ್ತಮ ಬಾಂಧವ್ಯ ಇತ್ತು. ಅಣ್ಣ-ತಂಗಿ ರೀತಿ ಅವರು ಕ್ಲೋಸ್ ಆಗಿದ್ದರು. ಜೋಡಿ ಟಾಸ್ಕ್ನಲ್ಲಿ ಜೋಡಿಯಾಗಿದ್ದ ಅವರಿಬ್ಬರ ನಡುವೆ ನಾಮಿನೇಷನ್ ವಿಚಾರ ಬಂದಾಗ ಶಿಶಿರ್ ಅವರು ತ್ಯಾಗ ಮಾಡಿ ತಾವೇ ನಾಮಿನೇಟ್ ಆಗಿದ್ದರು. ಇಷ್ಟೆಲ್ಲ ಮಾಡಿದರೂ ಕೂಡ ಚೈತ್ರಾ ಅವರು ಅವಕಾಶವಾದಿ ಆಗಿದ್ದಾರೆ. ಅರ್ಧ ಆಟದಲ್ಲಿ ಶಿಶಿರ್ ಅವರನ್ನು ಬಿಟ್ಟು ತ್ರಿವಿಕ್ರಮ್ ಜೊತೆ ಚೈತ್ರಾ ಕೈ ಜೋಡಿಸಿದ್ದು ಇದರಿಂದ ಶಿಶಿರ್ ಗರಂ ಆಗಿದ್ದಾರೆ.
ಈ ವಾರ ಜೋಡಿ ಆಟದ ನಡುವೆ ಬಿಗ್ ಬಾಸ್ ಒಂದು ಟ್ವಿಸ್ಟ್ ನೀಡಿದರು. ತಮ್ಮ ಜೋಡಿಯನ್ನು ಬಿಟ್ಟುಕೊಟ್ಟು ಕ್ಯಾಪ್ಟನ್ ಜೊತೆ ಆಟ ಮುಂದುವರಿಸಲು ಇಚ್ಛಿಸುತ್ತೀರಾ ಎಂದು ಬಿಗ್ ಬಾಸ್ ಕೇಳಿದರು. ಈ ಆಫರ್ ಅನ್ನು ಚೈತ್ರಾ ಕುಂದಾಪುರ ಅವರು ಒಪ್ಪಿಕೊಂಡರು. ಇದರಿಂದಾಗಿ ಶಿಶಿರ್ ಅವರು ಆಟದಿಂದ ಹೊರಗೆ ಉಳಿಯುವ ಸಾಧ್ಯತೆ ದಟ್ಟವಾಗಿತ್ತು. ಹಾಗಾಗಿ ಶಿಶಿರ್ ಕೋಪಗೊಂಡರು.
ಚೈತ್ರಾ ಮಾಡಿದ ಅನ್ಯಾಯದಿಂದಾಗಿ ಶಿಶಿರ್ ಸಿಕ್ಕಾಪಟ್ಟೆ ಸಿಟ್ಟು ಮಾಡಿಕೊಂಡಿದ್ದಾರೆ. ಇಷ್ಟು ದಿನ ಚೈತ್ರಾ ಬಗ್ಗೆ ಮೃದು ಧೋರಣೆ ಹೊಂದಿದ್ದ ಅವರು ಬುಧವಾರದ (ನವೆಂಬರ್ 13) ಎಪಿಸೋಡ್ನಲ್ಲಿ ಚೈತ್ರಾಳ ಅಸಲಿ ಮುಖ ಏನು ಎಂಬುದನ್ನು ಬಯಲು ಮಾಡಿದ್ದಾರೆ. ಅಣ್ಣ ಎನ್ನುತ್ತ ತಮ್ಮ ಬೆನ್ನಿಗೆ ಚೂರಿ ಹಾಕಲು ಪ್ರಯತ್ನಿಸಿದ ತಂಗಿಗೆ ಅವರು ಮಾತಿನಲ್ಲೇ ಗ್ರಹಚಾರ ಬಿಡಿಸಿದ್ದಾರೆ. ತಾವು ಕೂಡ ಚೈತ್ರಾ ಜೊತೆ ಜೋಡಿಯಾಗಿ ಆಡಲ್ಲ ಎಂದು ಅವರು ಕೂಗಾಡಿದ್ದಾರೆ.
‘ತ್ರಿವಿಕ್ರಮ್ ಮಾನಸಿಕವಾಗಿ, ದೈಹಿಕವಾಗಿ ಗಟ್ಟಿ ವ್ಯಕ್ತಿ’ ಎಂಬ ಕಾರಣವನ್ನು ನೀಡಿ ಚೈತ್ರಾ ಅವರು ತ್ರಿವಿಕ್ರಮ್ ಜೊತೆ ಜೋಡಿಯಾಗಲು ಬಯಸಿದ್ದಾರೆ. ಇದು ಶಿಶಿರ್ ಅವರಿಗೆ ಇನ್ನಷ್ಟು ಕೋಪ ತರಿಸಿದೆ. ‘ನಾಮಿನೇಷನ್ ಸಮಯದಲ್ಲಿ ಅಯ್ಯೋ, ಅಮ್ಮಾ ಅನ್ನೋದು. 12 ವರ್ಷ ಮಣ್ಣು ಹೊತ್ತಿರುವ ನಾವು ಆ್ಯಕ್ಟರ್ ಅಲ್ಲ.. ಇಲ್ಲಿ ಇದ್ದಾರೆ ನೋಡಿ ದೊಡ್ಡ ಆ್ಯಕ್ಟರ್’ ಎಂದು ಚೈತ್ರಾ ಮೇಲೆ ಶಿಶಿರ್ ಗರಂ ಆಗಿದ್ದಾರೆ.