ಬೆಂಗಳೂರು: ‘ನೀಟ್’ ಪರೀಕ್ಷೆ ಬರೆದವರು ಕೂಡ ರಾಜ್ಯದ ವೈದ್ಯಕೀಯ ಕಾಲೇಜಿನಲ್ಲಿ ಎಂಬಿಬಿಎಸ್ ಸೀಟು ಪಡೆಯಲು ಸಿಇಟಿಗೆ ನೋಂದಣಿ ಮಾಡಿಸಬೇಕು ಎಂಬ ನಿಯಮ ಹಿಂದಿನಿಂದಲೂ ಜಾರಿಯಲ್ಲಿದೆ. ಇದು ಹೊಸದಾಗಿ ಜಾರಿಯಾಗಿರುವ ನಿಯಮವೇನೂ ಅಲ್ಲ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಸ್ಪಷ್ಟಪಡಿಸಿದೆ.
ಈ ಸಂಬಂಧವಾಗಿ ಕೆಇಎ ಹೊಸ ನಿಯಮ ಜಾರಿಗೊಳಿಸಿರುವುದರಿಂದ ಹಲವಾರು ವಿದ್ಯಾರ್ಥಿಗಳಿಗೆ ಅನಾನುಕೂಲವಾಗಿದೆ ಎಂದು ಕೆಲವರು ಅನಗತ್ಯವಾಗಿ ಗುಲ್ಲೆಬ್ಬಿಸುತ್ತಿರುವ ಕಾರಣಕ್ಕೆ ಕೆಇಎ ಈ ಸ್ಪಷ್ಟನೆ ನೀಡಿದೆ. ಪ್ರಸಕ್ತ ಸಾಲಿನಲ್ಲಿ ‘ನೀಟ್’ ಬರೆದಿರುವ ಸುಮಾರು 2 ಲಕ್ಷ ಅಭ್ಯರ್ಥಿಗಳು ಸಿಇಟಿಗೆ ನೋಂದಣಿ ಮಾಡಿಸಿದ್ದಾರೆ. ಇದರಲ್ಲಿ 50,000 ವಿದ್ಯಾರ್ಥಿಗಳು ಹೊರ ರಾಜ್ಯಗಳಿಗೆ ಸೇರಿದವರಾಗಿದ್ದಾರೆ.
![Demo](https://ainlivenews.com/wp-content/uploads/2023/12/spoorthi-1.jpg)
ರಾಜ್ಯದಲ್ಲಿ ವೈದ್ಯಕೀಯ ಸೀಟು ಹಂಚಿಕೆಯನ್ನು ಕೆಇಎ ನಿರ್ವಹಿಸುತ್ತಾ ಬಂದಿದ್ದು, ನೀಟ್ ಬರೆದವರು ಸಿಇಟಿಗೆ ನೋಂದಣಿ ಮಾಡಿಸಬೇಕೆಂಬುದು ಈ ಹಿಂದಿನ ವರ್ಷಗಳಲ್ಲಿಯೂ ಜಾರಿಯಲ್ಲಿತ್ತು. ಅದೇ ವ್ಯವಸ್ಥೆ ಈ ವರ್ಷವೂ ಯಾವುದೇ ಬದಲಾವಣೆ ಇಲ್ಲದೆ ಮುಂದುವರಿದಿದೆ. ಎಷ್ಟು ಬಾರಿ ನೀಟ್ ಪರೀಕ್ಷೆ ತೆಗೆದುಕೊಂಡಿದ್ದರೂ ಕೂಡ ಆಯಾ ವರ್ಷದ ಸೀಟು ಹಂಚಿಕೆ ಪ್ರಕ್ರಿಯೆಯಲ್ಲಿ ಭಾಗವಹಿಸಬೇಕಾದರೆ ಸಿಇಟಿಗೆ ನೋಂದಣಿ ಮಾಡಿಸಿಕೊಳ್ಳುವುದು ಕಡ್ಡಾಯ.
ರಾಜ್ಯದಲ್ಲಿ ವೈದ್ಯಕೀಯ ಸೀಟು ಹಂಚಿಕೆಗೆ ಕೆಇಎ ನೋಡಲ್ ಸಂಸ್ಥೆ ಎಂದೂ ಕೆಇಎ ಸ್ಪಷ್ಟಪಡಿಸಿದೆ. ವೈದ್ಯಕೀಯ ಮತ್ತು ಎಂಜಿನಿಯರಿಂಗ್ ಕೋರ್ಸ್ ಗಳ ಕೌನ್ಸೆಲಿಂಗ್ ಪ್ರಕ್ರಿಯೆಯನ್ನು ಏಕಕಾಲದಲ್ಲಿ ನಡೆಸುತ್ತಿದ್ದು ಇದಕ್ಕಾಗಿ ಒಂದೇ ಅರ್ಜಿಯನ್ನು ಸ್ವೀಕರಿಸಲಾಗಿದೆ.
ಈ ಸಂಬಂಧ ರಾಜ್ಯ ಮತ್ತು ರಾಷ್ಟಮಟ್ಟದಲ್ಲೂ ಮಾಧ್ಯಮಗಳಲ್ಲಿ ಸಾಕಷ್ಟು ಪ್ರಚಾರ ಕೊಡಲಾಗಿದೆ ಎಂದೂ ಕೆಇಎ ತಿಳಿಸಿದೆ. ಕೆಇಎ ನಿಯಮಗಳನ್ನು ಈ ರೀತಿ ತಪ್ಪಾಗಿ ಅರ್ಥೈಸಿ, ವಿದ್ಯಾರ್ಥಿಗಳು ಮತ್ತು ಪೋಷಕರಲ್ಲಿ ಗೊಂದಲ ಉಂಟು ಮಾಡುವವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಕೆಇಎ ಎಚ್ಚರಿಸಿದೆ.
![](https://ainlivenews.com/wp-content/uploads/2024/01/Ad-Banner-copy-scaled.jpg)