ಬೆಳಗಾವಿ.ಸುವರ್ಣಸೌಧ ಡಿ.14: ಕೃಷಿ ಇಲಾಖೆ ವತಿಯಿಂದ ಬೆಳಗಾವಿ ಸುವರ್ಣ ಸೌಧದ ಬ್ಯಾಕ್ವೆಂಟ್ ಹಾಲ್ ನಲ್ಲಿ ಏರ್ಪಡಿಸಿದ್ದ ಸಿರಿಧಾನ್ಯ, ಸಾವಯವ ಅಂತರಾಷ್ಟ್ರೀಯ ವಾಣಿಜ್ಯ ಮೇಳದ ಪೂರ್ವಭಾವಿ ಕಾರ್ಯಕ್ರಮ ಅತ್ಯಂತ ಯಶ್ವಸಿಯಾಗಿ ನಡೆಯಿತು..
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಆಧುನಿಕ ಜಗತ್ತಿನಲ್ಲಿ ಸಿರಿಧಾನ್ಯ ಹೆಚ್ಚು ಜನಪ್ರಿಯ ಹಾಗು ಲಾಭದಾಯಕವಾಗಿ ರೂಪುಗೊಂಡಿದೆ. ಸರ್ಕಾರ ಕೂಡ ಇದನ್ನು ಪ್ರೋತ್ಸಾಹಿಸುತ್ತಿದೆ.. ರೈತರು ಹೆಚ್ಚಿನ ಸಂಖ್ಯೆಯಲ್ಲಿ ಇದನ್ನು ಬೆಳೆಯಬೇಕಿದೆ ಎಂದರು..
ಸಿರಿಧಾನ್ಯ ಅತ್ಯಂತ ಆರೋಗ್ಯಪೂರ್ಣ ಆಹಾರವಾಗಿದ್ದು, ನಮ್ಮ ಪೂರ್ವಜರು ಇದನ್ನು ಬೆಳೆಸಿ, ಬಳಸುತ್ತಿದ್ದರು. ಒಂದು ಹಂತದಲ್ಲಿ ಬಹುಸಂಖ್ಯೆ ಜನರಿಂದ ದೂರ ಉಳಿದಿದ್ದ ಸಿರಿಧಾನ್ಯ ಇದೀಗ ಉಳ್ಳವರ ಪಾಲಿಗೂ ಫೆವರೇಟ್ ಆಗಿದೆ ಎಂದರು.. ಅತ್ಯಂತ ಕಡಿಮೆ ನೀರಿನಲ್ಲಿಯೂ ಬೆಳೆಯಬಹುದಾದ ಸಿರಿಧಾನ್ಯ ಆರ್ಥಿಕವಾಗಿಯೂ ವರದಾನವಾಗಬಲ್ಲದು ಎಂದ ಮುಖ್ಯಮಂತ್ರಿ ಸಿದ್ದರಾಮಯ್ಯ, 2017 ರಲ್ಲಿ ತಾವು ಮುಖ್ಯಮಂತ್ರಿಯಾಗಿದ್ದಾಗ ಸಿರಿಧಾನ್ಯ ಮೇಳಕ್ಕೆ ನೀಡಿದ ಪ್ರೋತ್ಸಾಹ ಹಾಗು ಅದಕ್ಕೆ ರಾಷ್ಟ್ರ ಮಟ್ಟದಲ್ಲಿ ಸಿಕ್ಕ ಮನ್ನಣೆ ಸ್ಮರಿಸಿದರು.
ಕಾರ್ಯಕ್ರಮದಲ್ಲಿ ಪ್ರಸ್ತಾವಿಕ ನುಡಿ ಆಡಿದ ಕೃಷಿ ಸಚಿವ ಎನ್ ಚಲುವರಾಯಸ್ವಾಮಿ ಅವರು 2024 ರ ಜನವರಿ 5 ರಿಂದ 7 ರವರೆಗೆ ಬೆಂಗಳೂರಿನ ಆರಮನೆ ಮೈದಾನದ ತ್ರಿಪುರವಾಸಿನಿಯಲ್ಲಿ ಅಂತರಾಷ್ಟ್ರೀಯ ಸಾವಯವ ಹಾಗು ಸಿರಿಧಾನ್ಯ ವಾಣಿಜ್ಯ ಮೇಳವನ್ನು ಆಯೋಜಿಸಲಾಗಿದೆ. ಅದಕ್ಕೆ ಪೂರ್ವಭಾವಿಯಾಗಿ ಇಂದಿನ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.
ಅಂತರಾಷ್ಟ್ರೀಯ ಸಿರಿಧಾನ್ಯ ಮೇಳದಲ್ಲಿ ಹಲವರು ವಿದೇಶಿ ಪಾಲುದಾರರು ಭಾಗವಹಿಸುತ್ತಾರೆ. 2 ಲಕ್ಷಕ್ಕೂ ಅಧಿಕ ಸಂಖ್ಯೆಯಲ್ಲಿ ರೈತರು, ಗ್ರಾಹಕರು ಭಾಗವಹಿಸುವ ನಿರೀಕ್ಷೆ ಇದೆ.. ಸಿರಿಧಾನ್ಯ ಮಾರಾಟ ಹಾಗು ಪ್ರದರ್ಶನದ ನೂರಾರು ಮಳಿಗೆಗಳನ್ನು ತೆರೆಯಲಾಗುವುದು. ಸಾರ್ವಜನಿಕರು ಇದರಲ್ಲಿ ಭಾಗವಹಿಸುವಂತೆ ಈ ಮೂಲಕ ಮನವಿ ಮಾಡಲಾಗುವುದು ಎಂದರು. ಇದೇ ವೇಳೆ ಸಿರಿಧಾನ್ಯ ಮೇಳ ಕುರಿತು ಕಿರುಚಿತ್ರ ಪ್ರದರ್ಶನ ಎಲ್ಲರ ಗಮನ ಸೆಳೆಯಿತು.
ವಿಧಾನಸಭಾ ಪರಿಷತ್ ಸಭಾಪತಿಗಳಾದ ಬಸವರಾಜ್ ಹೊರಟ್ಟಿ, ವಿಧಾನಸಭೆ ಸ್ಪೀಕರ್ ಡಾ. ಯು.ಟಿ.ಖಾದರ್, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ವಿಧಾನ ಪರಿಷತ್ ಉಪ ಸಭಾಪತಿ ಪ್ರಾಣೇಶ್, ಅರಣ್ಯ ಸಚಿವ ಈಶ್ವರ್ ಖಂಡ್ರೆ ಮತ್ತಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಎಲ್ಲಾ ಸಚಿವರು, ಶಾಸಕರು, ಹಾಗು ಸಚಿವಾಲಯದ ಅಧಿಕಾರಿಗಳಿಗೆ ಹಾಗೂ ಮಾಧ್ಯಮ ಪ್ರತಿನಿಧಿಗಳಿಗೆ ಸಿರಿಧಾನ್ಯಗಳಿಂದ ಮಾಡಿದ ತಿನಿಸುಗಳನ್ನು ಉಣಬಡಿಸಲಾಯಿತು..
ಗಮನ ಸೇಳೆದ ಸಿರಿಧಾನ್ಯ ಖಾದ್ಯಗಳು..
ಕೃಷಿ ಇಲಾಖೆವತಿಯಿಂದ ಅಂತರಾಷ್ಟ್ರೀಯ ಸಿರಿಧಾನ್ಯ ಮೇಳದ ಪೂರ್ವಭಾವಿ ಕಾರ್ಯಕ್ರಮದಲ್ಲಿ ಆಯೋಜಿಸಿದ್ದ ಸಿರಿಧಾನ್ಯ ಖಾದ್ಯಗಳ ಭೋಜನ ಸಚಿವರು, ಶಾಸಕರ ಗಮನ ಸೆಳೆಯಿತು.. ರಾಗಿ ಮುದ್ದೆ, ಹುರಕ್ಕಿ ಹೊಳಗೆ, ಸಾವಿ ಮೊಸರನ್ನ, ಬರಗು ಹುಗ್ಗಿ, ನವಣೆ ಪುಳಿಯೋಗರೆ, ಜೋಳದ ವಡೆ, ಕಡಖ್ ಜೋಳದ ರೊಟ್ಟಿ, ಕಡಖ್ ಸಜ್ಜಿ ಜೋಳದ ರೊಟ್ಟಿ, ಸಿರಿಧಾನ್ಯದ ರೊಟ್ಟಿ, ಸಿರಿಧಾನ್ಯದ ಪುಲಾವ್ ಎಲ್ಲರ ಬಾಯಲ್ಲಿ ನೀರೂರಿಸಿತು. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಚಿವರು, ಶಾಸಕರು ಖಾದ್ಯಗಳನ್ನು ಸವಿದು ಮೆಚ್ಚುಗೆ ವ್ಯಕ್ತಪಡಿಸಿದರು..