ದೊಡ್ಡಬಳ್ಳಾಪುರ: ತಾಲೂಕಿನ ಕಂಟನಕುಂಟೆಯ ಲಿಟ್ಲ್ ಮಾಸ್ಟರ್ ಪಬ್ಲಿಕ್ ಶಾಲೆಯಲ್ಲಿ 2023-24 ನೇ ಸಾಲಿನ ಶಾಲಾ ಹಂತದ ಕ್ರೀಡಾಕೂಟ ನಡೆಯಿತು. ಎರಡು ದಿನಗಳ ಕಾಲ ನಡೆದ ಕ್ರೀಡಾಕೂಟದಲ್ಲಿ 1000ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿ ಕ್ರೀಡಾಸ್ಫೂರ್ತಿ ಮೆರೆದು ಸಂತಸ ಪಟ್ಟರು..
ಅತಿ ಹೆಚ್ಚು ಪದಕಗಳೊಂದಿಗೆ ಅಥ್ಲೆಟಿಕ್ಸ್ ಜೂನಿಯರ್ ವಿಭಾಗದಲ್ಲಿ ಮಾನಸ ಎಸ್. ಆರ್, ಯು.ಲಿಖಿತ್ ಚಾಂಪಿಯನ್ ಪ್ರಶಸ್ತಿ ಸ್ವೀಕರಿಸಿದರು. ಅಥ್ಲೆಟಿಕ್ಸ್ ಸೀನಿಯರ್ ವಿಭಾಗದಲ್ಲಿ ಟಿ.ನೀತು ಹಾಗೂ ಯಶವಂತ್ ಚಾಂಪಿಯನ್ ಆಗಿ ಹೊರಹೊಮ್ಮಿದರು. ಗುಂಪು ಸ್ಪರ್ಧೆಯಲ್ಲಿ ಪರ್ಲ್ ತಂಡ ಸಮಗ್ರ ಚಾಂಪಿಯನ್ ಪ್ರಶಸ್ತಿ ಸ್ವೀಕರಿಸಿದರೆ, ಸಫೈರ್ ತಂಡ ರನ್ನರ್ ಅಪ್ ಪ್ರಶಸ್ತಿ ಪಡೆದುಕೊಂಡಿತು.
ಇದೇ ಶಾಲೆಯ ನಾಲ್ವರು ವಿದ್ಯಾರ್ಥಿಗಳು 4×100 ರಿಲೇ ಓಟದಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದು, ಡಿ.2ರಂದು ಮಂಗಳೂರಿನ ಪುತ್ತೂರಿನಲ್ಲಿ ನಡೆಯುವ ರಾಜ್ಯಮಟ್ಟದ ಕ್ರೀಡಾಕೂಟದಲ್ಲಿ ಶಾಲೆಯನ್ನು ಪ್ರತಿನಿಧಿಸಲಿದ್ದಾರೆ. ಹ್ಯಾಮರ್ ಥ್ರೋ ಸ್ಪರ್ಧೆಯಲ್ಲೂ ಶಾಲೆಯ ವಿದ್ಯಾರ್ಥಿಯೊಬ್ಬರು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ವಿಜೇತ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ಶಾಲೆಯ ಕಾರ್ಯದರ್ಶಿ ಕೆ.ಜಿ. ಶ್ರೀನಿವಾಸ್ ಮೂರ್ತಿ ಅವರು, ಕ್ರೀಡೋತ್ಸವದ ಸಾಕಷ್ಟು ವಿಭಾಗಗಳಲ್ಲಿ ವಿದ್ಯಾರ್ಥಿಗಳು ಸಾಧನೆ ಮಾಡಿ ಪದಕ ಪಡೆದಿದ್ದಾರೆ.
ಪ್ರತಿಯೊಬ್ಬರು ಮಾನಸಿಕವಾಗಿ ಸದೃಢವಾಗಿರಬೇಕಾದರೆ ಕ್ರೀಡೆಯಲ್ಲಿ ಆಸಕ್ತಿ ಇರಬೇಕು. ಜೊತೆಗೆ ಭಾಗವಹಿಸಬೇಕು ಎಂದು ಅಭಿಪ್ರಾಯಪಟ್ಟರು. ಕಾರ್ಯಕ್ರಮದಲ್ಲಿ ಶಾಲೆಯ ಅಧ್ಯಕ್ಷೆ ಉಷಾ ಶ್ರೀನಿವಾಸಮೂರ್ತಿ, ಮುಖ್ಯೋಪಾಧ್ಯಾಯಿನಿ ಶೋಭಾ, ದೈಹಿಕ ಶಿಕ್ಷಕ ವಿನೋದ್ ರಾಜ್, ಮೀನಾಕ್ಷಿ , ನವೀನ್ ಕುಮಾರ್ ಮತ್ತು ಲೋಕೇಶ್ ಭಾಗವಹಿಸಿದ್ದರು.