ಟೆಲ್ ಅವೀವ್: ಅಕ್ಟೋಬರ್ 7 ರಿಂದ ನಡೆಯುತ್ತಿರುವ ಇಸ್ರೇಲ್-ಹಮಾಸ್ ನಡುವಿನ ಭೀಕರ ಯುದ್ಧದಲ್ಲಿ (Israel Hamas War) ಮಹತ್ವದ ಬೆಳವಣಿಗೆ ಕಂಡುಬಂದಿದೆ. ಒತ್ತೆಯಾಳುಗಳ (Hostages) ಬಿಡುಗಡೆಗಾಗಿ ಕದನ ವಿರಾಮ ನಿರ್ಧಾರಕ್ಕೆ ಒಪ್ಪಂದ ಏರ್ಪಟ್ಟಿದ್ದು, ಕೆಲವೇ ಗಂಟೆಗಳಲ್ಲಿ ಕದನ ವಿರಾಮ ಘೋಷಣೆಯಾಗಲಿದೆ.
ನಾಲ್ಕು ದಿನ ಕದನ ವಿರಾಮ ಘೋಷಣೆಯಾಗಲಿದ್ದು, ಒತ್ತೆಯಾಳುಗಳ ವಿನಿಮಯವೂ ನಡೆಯಲಿದೆ. ಒಟ್ಟು 4 ದಿನಗಳು ಕದನ ವಿರಾಮ ಇರಲಿದೆ. ಮೊದಲ ದಿನವೇ ಹಮಾಸ್ ಉಗ್ರರ ಗುಂಪು ಸೆರೆಹಿಡಿದಿದ್ದ 13 ಮಂದಿ ಇಸ್ರೇಲ್ ಒತ್ತೆಯಾಳುಗಳನ್ನು ಬಿಡುಗಡೆ ಮಾಡುವ ನಿರೀಕ್ಷೆಯಿದೆ ಎಂದು ಮಧ್ಯವರ್ತಿ ಕತಾರ್ (Qatar) ಹೇಳಿದೆ.
ಕತಾರ್ ವಿದೇಶಾಂಗ ಸಚಿವಾಲಯದ ಪ್ರಕಾರ, ಭಾರತೀಯ ಕಾಲಮಾನ ಬೆಳಗ್ಗೆ 10:30ರಿಂದಲೇ ಕದನ ವಿರಾಮ ಪ್ರಾರಂಭವಾಗಲಿದೆ. ಆದ್ರೆ ಹಮಾಸ್ ಸಂಜೆ 7:30ರ ನಂತರ ಒತ್ತೆಯಾಳುಗಳ ಮೊದಲ ಬ್ಯಾಚ್ ಅನ್ನು ಬಿಡುಗಡೆ ಮಾಡಲಿದೆ. ಒಂದೇ ಕುಟುಂಬದ ಮಹಿಳೆಯರು ಮತ್ತು ಮಕ್ಕಳನ್ನು ಒಳಗೊಂಡು 13 ಮಂದಿಯನ್ನು ಹಮಾಸ್ ಬಿಡುಗಡೆಗೊಳಿಸಲಿದೆ. ಒಪ್ಪಂದದ ಪ್ರಕಾರ 4 ದಿನಗಳಲ್ಲಿ ಒಟ್ಟು 50 ಮಂದಿಯನ್ನು ಬಿಡುಗಡೆ ಮಾಡಲಾಗುತ್ತದೆ ಎಂದು ತಿಳಿಸಿದೆ.