ರಸ್ತೆ ಅಪಘಾತ ಸಂತ್ರಸ್ತರಿಗೆ ನಗದು ರಹಿತ ಚಿಕಿತ್ಸೆ ನೀಡುವ ಹೊಸ ಯೋಜನೆಯನ್ನು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಘೋಷಿಸಿದ್ದಾರೆ.
ಅಪಘಾತ ಸಂಭವಿಸಿದ 24 ಗಂಟೆಗಳ ಒಳಗೆ ಪೊಲೀಸರಿಗೆ ಮಾಹಿತಿ ನೀಡಿದ ನಂತರ, ಯೋಜನೆಯು ತಕ್ಷಣವೇ ಸಂತ್ರಸ್ತರ 7 ದಿನಗಳ ಚಿಕಿತ್ಸೆಯ ವೆಚ್ಚವನ್ನು ಅಥವಾ ಗರಿಷ್ಠ 1.5 ಲಕ್ಷ ರೂಪಾಯಿ ವೆಚ್ಚವನ್ನು ಭರಿಸಲಿದೆ ಎಂದು ಗಡ್ಕರಿ ಹೇಳಿದ್ದಾರೆ.
ಹಿಟ್ ಅಂಡ್ ರನ್ ಪ್ರಕರಣದಲ್ಲಿ ಮೃತಪಟ್ಟರೆ ಮೃತ ವ್ಯಕ್ತಿಯ ಕುಟುಂಬಕ್ಕೆ 2 ಲಕ್ಷ ರೂಪಾಯಿ ಪರಿಹಾರ ಸಿಗಲಿದೆ. “ನಾವು ಈ ನಗದು ರಹಿತ ಯೋಜನೆಯನ್ನು ಕೆಲವು ರಾಜ್ಯಗಳಲ್ಲಿ ಪ್ರಾಯೋಗಿಕವಾಗಿ ನಡೆಸಿದ್ದೇವೆ. ನಾವು ಯೋಜನೆಯಲ್ಲಿ ಕೆಲವು ದೌರ್ಬಲ್ಯಗಳನ್ನು ಗಮನಿಸಿದ್ದೇವೆ. ನಾವು ಅವುಗಳನ್ನು ಸುಧಾರಿಸುತ್ತಿದ್ದೇವೆ ಮತ್ತು ಇದು ಖಂಡಿತವಾಗಿಯೂ ಪ್ರಯೋಜನಕಾರಿಯಾಗಿದೆ’ ಎಂದು ನವದೆಹಲಿಯ ಭಾರತ ಮಂಟಪದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
“ನಮ್ಮ ಪ್ರಮುಖ ಆದ್ಯತೆ ರಸ್ತೆ ಸುರಕ್ಷತೆಯಾಗಿತ್ತು. 2024 ರಲ್ಲಿ 1.8 ಲಕ್ಷ ಜನರು ರಸ್ತೆ ಅಪಘಾತಗಳಲ್ಲಿ ಸಾವನ್ನಪ್ಪಿದ್ದಾರೆ. ಅವರಲ್ಲಿ 30,000 ಜನರು ಹೆಲ್ಮೆಟ್ ಧರಿಸದೇ ಸಾವನ್ನಪ್ಪಿದ್ದಾರೆ. ಮತ್ತೊಂದು ಗಂಭೀರ ವಿಷಯವೆಂದರೆ ಮಾರಣಾಂತಿಕ ಅಪಘಾತಗಳಿಗೆ ಬಲಿಯಾದವರಲ್ಲಿ 66% 18-34 ವರ್ಷ ವಯಸ್ಸಿನವರು. ನಮ್ಮ ಶಾಲೆಗಳು ಮತ್ತು ಕಾಲೇಜುಗಳಲ್ಲಿ ದೋಷಪೂರಿತ ಪ್ರವೇಶ ಮತ್ತು ನಿರ್ಗಮನ ಸ್ಥಳಗಳಿಂದ 10,000 ಮಕ್ಕಳು ಸಾವನ್ನಪ್ಪಿದ್ದಾರೆ’ ಎಂದು ಗಡ್ಕರಿ ಹೇಳಿದ್ದಾರೆ.
“ಚಾಲನಾ ಪರವಾನಗಿ ಇಲ್ಲದವರಿಂದ ಉಂಟಾದ ಅಪಘಾತಗಳು ಸುಮಾರು 3,000 ಸಾವುಗಳಿಗೆ ಕಾರಣವಾಗಿವೆ. ನಮ್ಮ ಸಭೆಯ ಪ್ರಮುಖ ಅಜೆಂಡಾಗಳಲ್ಲಿ ಡ್ರೈವಿಂಗ್ ತರಬೇತಿ ಕೇಂದ್ರಗಳು ಕೂಡ ಆಗಿತ್ತು. ನಮ್ಮ ದೇಶದಲ್ಲಿ 22 ಲಕ್ಷ ಚಾಲಕರ ಕೊರತೆ ಇದೆ. ಅದಕ್ಕಾಗಿ ಹೊಸ ನೀತಿಯನ್ನೂ ರೂಪಿಸಿದ್ದೇವೆ ಎಂದಿದ್ದಾರೆ.