ಗದಗ: ಮೆಣಸಿನಕಾಯಿ ಬೆಳೆ ಕಾಯುತ್ತಿದ್ದ ವ್ಯಕ್ತಿವೋರ್ವನ ಭೀಕರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಗದಗ ಜಿಲ್ಲಾ ಪೊಲೀಸರಿಗೆ ಮಹತ್ವದ ಮಾಹಿತಿ ಲಭ್ಯವಾಗಿದೆ. ಗದಗ ತಾಲೂಕಿನ ತಿಮ್ಮಾಪೂರ ಗ್ರಾಮದ ರೈತ ಬಾಲಪ್ಪ ಕೊಪ್ಪದ ಎನ್ನುವ ರೈತನ ಜಮೀನಿನಲ್ಲಿ ಮೆಣಸಿನಕಾಯಿ ಬೆಳೆ ಕಾಯುತ್ತಿದ್ದ ಕೊಪ್ಪಳ ಜಿಲ್ಲೆಯ ಕುಕನೂರು ತಾಲೂಕಿನ ಮಾಳೆಕೊಪ್ಪ ಗ್ರಾಮದ ಸಣ್ಣ ಹನಮಪ್ಪ ವಜ್ರದ ಎಂಬಾತನನ್ನು ದುಷ್ಕರ್ಮಿಗಳು ಭೀಕರವಾಗಿ ಹತ್ಯೆ ಮಾಡಿ ರುಂಡ ಹೊತ್ತೊಯ್ದದ್ದರು.
ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡಿರುವ ಗದಗ ಜಿಲ್ಲಾ ಎಸ್ಪಿ ಬಿ.ಎಸ್. ನೇಮಗೌಡ ಅವರು, ಡಿವೈಎಸ್ಪಿ ನೇತೃತ್ವದಲ್ಲಿ ನಾಲ್ಕು ತಂಡಗಳನ್ನು ರಚಿಸಿದ್ದಾರೆ. ನಿನ್ನೆಯಿಂದಲೇ ಶ್ವಾನದಳ, ಸೀನ್ ಆಫ್ ಕ್ರೈಂ ತಂಡದೊಂದಿಗೆ ರುಂಡಕ್ಕಾಗಿ ಶೋಧ ಕಾರ್ಯ ನಡೆಸಿದ್ದ ಪೊಲೀಸರಿಗೆ ಇಂದು ಕೊಲೆ ನಡೆದ ಸ್ಥಳದಿಂದ ನಾಲ್ಕು ನೂರು ಮೀಟರ್ ದೂರದ ಮೆಕ್ಕೆಜೋಳ ಜಮೀನೊಂದರಲ್ಲಿ ವಿಕೃತಿ ಸ್ಥಿತಿಯಲ್ಲಿ ಪತ್ತೆಯಾಗಿದೆ. ತಲೆ ಬುರುಡೆ, ಮುಖದ ಚರ್ಮ ಸುಲಿದ ರೀತಿಯಲ್ಲಿ ಪತ್ತೆಯಾಗಿದ್ದು, ಪೊಲೀಸರು ಗಾಬರಿ ಬಿಳುವಂತಾಗಿದೆ.