ಬೆಂಗಳೂರು:- ಬಿಎಂಟಿಸಿ ಚಾಲಕನ ಮೇಲೆ ಹಲ್ಲೆ ಕೇಸ್ ಗೆ ಸಂಬಧಪಟ್ಟಂತೆ ಬಸ್ ಚಾಲಕರಿಂದ ಪ್ರತಿಭಟನೆ ನಡೆದಿದ್ದು, ಮತ್ತೊಂದೆಡೆ ಆಸ್ಪತ್ರೆಗೆ ಮಹಿಳೆ ದಾಖಲಾಗಿದ್ದಾರೆ.
ಬೆಂಗಳೂರಿನ ಸುಮ್ಮನಹಳ್ಳಿ ಬಳಿ ಬಿಎಂಟಿಸಿ ಎಲೆಕ್ಟ್ರಿಕ್ ಬಸ್ ಚಾಲಕನ ಮೇಲೆ ಮಹಿಳೆ ಅಟ್ಟಹಾಸ ಮೆರೆದಿದ್ದಳು. ಮುಂದೆ ಹೋಗುತ್ತಿದ್ದ ಸ್ಕೂಟರ್ಗೆ ಬಸ್ ತಾಗಿದ್ದಕ್ಕೆ ಉಗ್ರರೂಪ ತಾಳಿದ ಮಹಿಳೆ ಬಸ್ಸಿಗೆ ನುಗ್ಗಿ ಪ್ರಯಾಣಿಕರ ಎದುರೇ ಹಿಗ್ಗಾಮುಗ್ಗಾ ಥಳಿಸಿದ್ದಳು.
ಮಹಿಳೆಯ ಏಟಿಗೆ ಚಾಲಕ ಬಸ್ನಲ್ಲೇ ಕುಸಿದು ಬಿದ್ದಿದ್ದ. ಯಾರು ಬಿಡಿಸಿದರೂ ಜಗ್ಗದ ಮಹಿಳೆ ರೌದ್ರಾವತಾರವನ್ನೇ ತಾಳಿದ್ದಳು. ಈ ಘಟನೆ ಖಂಡಿಸಿ ಡಿಪೋ ನಂಬರ್ 22ರ ಇವಿ ಬಸ್ ಚಾಲಕರು ಡಿಪೋ ಮುಂದೆ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.
ಘಟನೆ ಸಂಬಂಧ ನಿನ್ನೆ ಕಾಮಾಕ್ಷಿಪಾಳ್ಯ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ಎಫ್ಐಆರ್ ಕೂಡ ಆಗಿತ್ತು. ಕೇಸ್ ದಾಖಲಾದ ಬಳಿಕ ರಾತ್ರಿ ಮಹಿಳೆಯನ್ನು ಠಾಣಾ ಜಾಮೀನಿನ ಮೇಲೆ ಬಿಟ್ಟು ಕಳುಹಿಸಿದ್ದಾರೆ. ಇದು ಚಾಲಕರ ಆಕ್ರೋಶಕ್ಕೆ ಕಾರಣವಾಗಿದೆ.