ಮಂಗಳೂರು:- ಮಂಗಳೂರಿನ ಹೊರವಲಯದ ಕುಳಾಯಿ ಎಂಬಲ್ಲಿ ಭಾನುವಾರ ಅಪಘಾತ ಸಂಭವಿಸಿದೆ. ಸಿನಿಮೀಯ ಶೈಲಿಯಲ್ಲಿ ಮೂವರು ಪಾದಚಾರಿಗಳ ಮೇಲೆ ಕಾರು ಹರಿದ ಪರಿಣಾಮ ಓರ್ವ ಸಾವನ್ನಪ್ಪಿದ್ದಾರೆ.
50 ವರ್ಷದ ದೀಪುಗೌಡ ಮೃತ ವ್ಯಕ್ತಿ. ಗಾಯಗೊಂಡಿರುವ ಕೊಪ್ಪಳದ ಕರಟಗಿಯ ಪ್ರದೀಪ್ ಕೊಲ್ಕಾರ್, ಮಂಗಳೂರಿನ ಕೋಡಿಕೆರೆ ನಿವಾಸಿ ನಾಗರಾಜ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಕುಳಾಯಿಯ ಶಂಕರ ಭವನ ಹೋಟೆಲ್ನಿಂದ ಹೊರಬಂದು 66ನೇ ರಾಷ್ಟ್ರೀಯ ಹೆದ್ದಾರಿಯನ್ನು ದಾಟುತ್ತಿದ್ದರು. ಈ ವೇಳೆ ಉಡುಪಿ ಕಡೆಯಿಂದ ಬಂದ ಕೆಎ-19-ಎಎ-0746 ನಂಬರ್ನ ಪಿಕಪ್ ವಾಹನ ಕಾರಿಗೆ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ರಭಸಕ್ಕೆ ಕಾರು ಮುಂದೆ ತಳ್ಳಲ್ಪಟ್ಟು, ರಸ್ತೆ ದಾಟುತ್ತಿದ್ದ ಮೂವರು ಪಾದಚಾರಿಗಳಿಗೆ ಡಿಕ್ಕಿ ಹೊಡೆದಿದೆ.
ಕೂಡಲೇ ಮೂವರನ್ನು ಆಸ್ಪತ್ರೆಗೆ ರವಾನಿಸಲಾಗಿದ್ದು, ಮಾರ್ಗ ಮಧ್ಯೆ ಓರ್ವ ಸಾವನ್ನಪ್ಪಿದ್ದಾನೆ. ಇನ್ನುಳಿದ ಇಬ್ಬರನ್ನು ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿದೆ.