ಒಟ್ಟಾವ : ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೋ ಸೋಮವಾರ ತಮ್ಮ ಹದ್ದೆಗೆ ರಾಜೀನಾಮೆ ನೀಡಿದ್ದಾರೆ. ನೂತನ ಪ್ರಧಾನಿ ಆಯ್ಕೆಯಾಗುವವರೆಗೂ ತಾವು ಪ್ರಧಾನಿ ಹುದ್ದೆಯನ್ನು ಮುಂದುವರೆಯುವುದಾಗಿ ಟ್ರುಡೋ ತಿಳಿಸಿದ್ದಾರೆ. ಈ ಮಧ್ಯೆ ಟ್ರುಡೋ ಅವರಿಗೆ ಅಮೆರಿಕದ ಚುನಾಯಿತ ಅಧ್ಯಕ್ಷ ಟ್ರಂಪ್ ಬೆದರಿಕೆ ಹಾಕಿದ್ದು ಇದಕ್ಕೆ ಟ್ರಡೋ ತಿರುಗೇಟು ನೀಡಿದ್ದಾರೆ.
ಜಸ್ಟಿನ್ ಟ್ರುಡೋ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ ಕೆಲವೇ ಗಂಟೆಗಳಲ್ಲಿ ಅಮೆರಿಕಾ ನೂತನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕೆನಡಾವು ಅಮೆರಿಕದ 51ನೇ ರಾಜ್ಯವಾಗಲು ಆರ್ಥಿಕ ಬಲ ಬಳಕೆಗೂ ಸಿದ್ಧ ಎಂದಿದ್ದರು. ಇದಕ್ಕೆ ಪ್ರತಿಕ್ರಿಯಿಸಿರುವ ಕೆನಡಾ ಹಂಗಾಮಿ ಪ್ರಧಾನಿ ಜಸ್ಟಿನ್ ಟ್ರೂಡೊ, ಇದು ಎಂದಿಗೂ ಸಾಧ್ಯವಾಗದು ಎಂದಿದ್ದಾರೆ.
ಕೆನಡಾವು ಅಮೆರಿಕದ ಜತೆ ವಿಲೀನಗೊಳ್ಳುವ ಸಾಧ್ಯತೆಯನ್ನು ಕಲ್ಪಿಸಲೂ ಸಾಧ್ಯವಿಲ್ಲ. ಎರಡೂ ದೇಶಗಳು ಪರಸ್ಪರ ಅತೀ ದೊಡ್ಡ ವ್ಯಾಪಾರ ಮತ್ತು ಭದ್ರತಾ ಪಾಲುದಾರರಾಗಿ ಇರುವುದರಿಂದ ಎರಡೂ ದೇಶಗಳ ಕಾರ್ಮಿಕರು ಮತ್ತು ಸಮುದಾಯಕ್ಕೆ ಪ್ರಯೋಜನವಾಗಲಿದೆ ಎಂದು ಟ್ರೂಡೋ ಹೇಳಿದ್ದಾರೆ.
ಟ್ರಂಪ್ ಅವರ ಹೇಳಿಕೆಯು ಕೆನಡಾದ ಬಗ್ಗೆ , ಕೆನಡಾ ಹೇಗೆ ಬಲಿಷ್ಟ ದೇಶವಾಗಿದೆ ಎಂಬ ಕುರಿತ ಸಂಪೂರ್ಣ ತಿಳುವಳಿಕೆಯ ಕೊರತೆಯನ್ನು ಸೂಚಿಸಿದೆ. ನಮ್ಮ ಅರ್ಥವ್ಯವಸ್ಥೆ ಬಲಿಷ್ಟವಾಗಿದೆ, ನಮ್ಮ ಜನರು ಬಲಿಷ್ಟವಾಗಿದ್ದಾರೆ ಎಂದು ಕೆನಡಾ ವಿದೇಶಾಂಗ ಸಚಿವೆ ಮೆಲಾನಿ ಜೋಲಿ ಪ್ರತಿಕ್ರಿಯಿಸಿದ್ದು ದೇಶವು ಬೆದರಿಕೆಗೆ ಎಂದಿಗೂ ಬಗ್ಗುವುದಿಲ್ಲ ಎಂದು ಹೇಳಿದ್ದಾರೆ.